ಕರ್ವಾಲೊ
1
ನಾನು ಮೂಡಿಗೆರೆ ಜೇನು ಸೊಸೈಟಿಯ ಬಾಗಿಲುಗಳನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ ಮಲೆನಾಡಿನಲ್ಲಿ ಮಳೆಗಾಲ ಆರಂಭವಾಗಿ ಆಗಲೇ ಅನೇಕ ತಿಂಗಳುಗಳು ಕಳೆದಿದ್ದವು. ಊರೆಲ್ಲಾ ಕೆಸರು ಕೊಚ್ಚೆ ಆವರಿಸಿತ್ತು. ಬೆರಳು ಸಂದಿಗಳಲ್ಲೆಲ್ಲಾ ಕೆಸರು ಹುಣ್ಣು, ಮೂಗಿನಲ್ಲಿ ಇಳಿಯುವ ನೆಗಡಿ, ಒದ್ದೆಯಾದ ಪ್ಯಾಂಟು ಇವುಗಳೊಡನೆ ನಾನು ಒಳ ನುಗ್ಗಿದೆ. ಹೊರಗಿನ ಬೋರ್ಡಿನಲ್ಲಿ ಬರೆದಿದ್ದ “ಜೇನು ಪೋಶಕರ ಸಹಕಾರಿ ಸಂಘ” ಎಂಬ ಬರಹದಲ್ಲಿ “ಷ” ಇರಬೇಕೋ “ಶ” ಇರಬೇಕೋ ಎಂದು ಯೋಚಿಸುತ್ತಾ ತಲೆ ಎತ್ತಿದಾಗ ವರಾಂಡದ ಒಳಗೆ ಒಂದು ದೊಡ್ಡ ಕೋಣೆಯೂ, ಪಕ್ಕದಲ್ಲಿ ಒಂದು ಸಣ್ಣ ಕೋಣೆಯೂ ಕಂಡಿತು. ದೊಡ್ಡ ಹಾಲಿನಲ್ಲಿ ಒಂದು ತಕ್ಕಡಿ ನೇತು ಬಿದ್ದಿತ್ತು. ಒಳಗೆ ಕಾಣುತ್ತಿದ್ದ ಸಣ್ಣ ಕೋಣೆಯೇ ಆಫೀಸಿರಬೇಕೆಂದು ಯೋಚಿಸಿ, ದೊಡ್ಡ ಹಾಲಿನಲ್ಲಿ ಯಾರೂ ಕಾಣದುದರಿಂದ ಆಫೀಸಿನತ್ತ ಸಾಗಿದೆ.
ತಂದೆಯವರಿಗೆ ಕೊಂಚ ಜೇನುತುಪ್ಪ ಬೇಕೆಂದೂ, ಮೈಸೂರಿನಲ್ಲಿ ಜೇನು ತುಂಬಾ ದುಬಾರಿಯಾದುದರಿಂದ ಮೂಡಿಗೆರೆಯಲ್ಲೇನಾದರೂ ಸುಲಭ ದರದಲ್ಲಿ ಸಿಗುತ್ತದೆಯೋ ನೋಡು ಎಂದು ಬರೆದಿದ್ದರು. ಯಾರೋ ಆಯುರ್ವೇದ ಪಂಡಿತರು ದಿನಾ ಒಂದು ಚಮಚೆ ಜೇನನ್ನು ನೀರಿನಲ್ಲಿ ಕದಡಿ ಬೆಳಿಗ್ಗೆ ಕುಡಿಯಿರಿ ಎಂದು ಅವರಿಗೆ ತಿಳಿಸಿದ್ದರಂತೆ. ಆದ್ದರಿಂದ ತಿಂಗಳಿಗೆ ಅವರಿಗೆ ಅರ್ಧ ಬಾಟಲು ಜೇನು ಬೇಕಾಗುತ್ತಿದ್ದಿತು. ಈ ಲೆಕ್ಕದ ಮೇಲೆ ಸುಮಾರು ಏಳು ಬಾಟಲು ಜೇನು ಬೇಕಾದೀತೆಂದು ಲೆಕ್ಕ ಹಾಕಿ ಬಾಟಲಿಗೆ ಹತ್ತು ರೂಪಾಯಿಯಂತೆ ಎಪ್ಪತ್ತು ರೂಪಾಯಿಗಳನ್ನು ಜೇಬೊಳಗೆ ಇಟ್ಟುಕೊಂಡು ಒಳ ನುಗ್ಗಿದ್ದೆ.
ಆಫೀಸಿನೊಳಗೆ ಇಣುಕಿದಾಗ ಇಬ್ಬರು ಯುವಕರು ಏನನ್ನೋ ಬರೆಯುತ್ತ ಕುಳಿತಿದ್ದರು. ನಾನು ಇಣುಕಿದಾಗ ಒಬ್ಬ ಯುವಕ ತಲೆ ಎತ್ತಿ ನನ್ನನ್ನು
ನೋಡಿ “ಏನು?” ಎನ್ನುವಂತೆ ನನ್ನ ಮುಖ ನೋಡಿದ. ನಾನು “ಜೇನುತುಪ್ಪ” ಎಂದು ಮಾತನ್ನು ಆರಂಭಿಸುತ್ತಿದ್ದಂತೆಯೇ ಆತ “ಜೇನು ಈಗ ತಗೊಳ್ಳೋದಿಲ್ಲ. ಇನ್ನೊಂದೆರಡು ತಿಂಗಳು ಅದನ್ನು ಕೊಳ್ಳೋದನ್ನು ನಿಲ್ಲಿಸಿಬಿಟ್ಟಿದ್ದೇವೆ” ಎಂದು ಒಂದೇ ಉಸುರಿಗೆ ಹೇಳಿದ. ಅವನ ಮಾತಿನಿಂದ ಇನ್ನೊಬ್ಬಾತ, ಬರೆಯುತ್ತಾ ಕುಳಿತಿದ್ದವನು ತಲೆ ಎತ್ತಿ ನೋಡಿದ. ಆತ ನನ್ನನ್ನು ಗುರುತಿಸಿದನೆಂದು ಕಾಣುತ್ತದೆ. ಗಾಬರಿಗೊಂಡವನಂತೆ ಏಳುತ್ತಾ ಇನ್ನೊಬ್ಬನಿಗೆ “ಏ ತಡಿಯೋ ತಡಿಯೋ” ಎಂದು, “ಬನ್ನಿ ಸಾರ್, ಬನ್ನಿ ಸಾರ್” ಎಂದು ನನಗೆ ಹೇಳಿದ. ಆತನಿಗೆ ನನ್ನ ಪರಿಚಯವಿದ್ದುದನ್ನು ಕಂಡು ನನಗೆ ಹೆಮ್ಮೆ, ಸಮಾಧಾನ ಆಯ್ತು. ನನ್ನ ಗಲೀಜುಮಯವಾದ ಉಡುಪನ್ನು ಶಪಿಸುತ್ತಾ ಒಳಗೆ ಸರಿದು, ಅವರು ತೋರಿದ ಕುರ್ಚಿ ಮೇಲೆ ಕುಳಿತೆ.
“ತಮ್ಮದೇ ಅಲ್ವೇ ಸಾರ್ ಸಿನಿಮಾ ಅದು…ಹಿಷ್ಠಿ” ಎಂದು ಆತ ಕೇಳಿದ.
“ಇಲ್ಲಪ್ಪಾ ನನ್ನದಲ್ಲ. ನನ್ನ ಕತೇನ ಸಿನಿಮಾ ಮಾಡಿದ್ದಾರೆ ಅಷ್ಟೇ.”
ಮೊದಲು ಮಾತಾಡಿದವನು ಈ ವೇಳೆಗೆ ತನ್ನ ಅಚಾತುರ್ಯಕ್ಕೆ ಬೇಸರಿಸಿ
“ನಮಸ್ಕಾರಾ ಸಾರ್. ಗೊತ್ತಾಗ್ಲಿಲ್ಲ. ಯಾರೋ ಜೇನು ಕೊಡೋದಕ್ಕೆ ಬಂದವರಂತ ತಿಳಿದೆ” ಎಂದ.
“ಜೇನು ಕೊಡೋದಕ್ಕಲ್ಲಪ್ಪಾ, ಜೇನು ಕೊಳ್ಳೋದಕ್ಕೆ ಬಂದಿದ್ದೀನಿ, ಏಳು ಬಾಟಲಿ ಜೇನು ಬೇಕಿತ್ತು.”
“ಬಾಟ್ಲಿ ಇಲ್ವಲ್ಲಾ ಸಾರ್. ಏನಾದರೂ ತಂದಿದೀರ? ಹಾಕಿಕೊಡ್ತೀವಿ” ಎಂದ ಒಬ್ಬಾತ.
ಅಷ್ಟರಲ್ಲಿ ನನ್ನನ್ನು ಮೊದಲು ಗುರುತು ಹಿಡಿದಾತ “ನೋಡೀ ಸಾರ್ ಇವರು ಮಂದಣ್ಣಾಂತ. ಬೀಮನ್ ಕೆಲಸ ಕಲೀತಾ ಇದಾರೆ. ನನ್ನೆಸರು ಲಕ್ಷ್ಮಣಾಂತ, ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದೀನಿ” ಎಂದು ಪರಿಚಯ ಮಾಡಿಕೊಂಡ. ಮಂದಣ್ಣ ಎದ್ದು ನಮಸ್ಕಾರ ಮಾಡಿ ಕುಳಿತ. ಅವನ ಮುಖದಲ್ಲಿ ನಾನಾರೆಂದು ಗೊತ್ತಾಗಲಿಲ್ಲವೆಂಬುದು ಸುವ್ಯಕ್ತವಾಗುತ್ತಿದ್ದಿತು. ಲಕ್ಷ್ಮಣ ಆತನ ಕಡೆ ತಿರುಗಿ “ಲೋ ಮಂದಾ, ಇವರು ಯಾರೂಂತ ಗೊತ್ತಲ್ಲಾ?” ಎಂದ. ಮಂದಣ್ಣ ಚೆನ್ನಾಗಿ ಗೊತ್ತಿದೆ ಎಂಬಂತೆ ತಲೆಯಾಡಿಸಿ ನನ್ನ ಮರ್ಯಾದೆ ಉಳಿಸಿದ. ನಾನು ಇಬ್ಬರ ಕಡೆಗೂ ನೋಡಿ ನಕ್ಕೆ.
“ಬಾಟ್ಲಿ ಆದರೆ ಒಂದು ಬಾಟ್ಲಿ ತುಪ್ಪಕ್ಕೆ ಹತ್ತು ರೂಪಾಯಿ ಆಗುತ್ತೆ ಸಾರ್. ಮಡಕೆ ತುಪ್ಪ ಆದರೆ ಹೆಚ್ಚ ಕಡಿಮೆ ಹಾಕಿ ಕೊಡೋಣ ಸಾರ್” ಎಂದು ಮಂದಣ್ಣ ಹೇಳಿದ. ನನಗೆ ಬಾಟ್ಲಿಯದಾದರೇನು ಮಡಕೇದಾದರೇನು ಎರಡೂ ತುಪ್ಪಾ ತಾನೆ ಎನ್ನಿಸಿ ಕೇಳಿದೆ. ಅದಕ್ಕೆ ಮಂದಣ್ಣ “ಬಾಟ್ಲಿದಾದರೆ ಮೆಶೀನಿನಲ್ಲಿ ತೆಗೆದಿದ್ದೇವೆ ಸಾರ್, ಮಡಕೇದು ಕೈಯಲ್ಲಿ ಹಿಂಡಿ ತೆಗೆದಿದ್ದೇವೆ. ಮಡಕೇ ತುಪ್ಪ ನೋಡೋಕೆ ಕೊಂಚ ಮಂಕಾಗಿದೆ. ಅನುಭವಸ್ತರು ಕೈಯಲ್ಲಿ ಹಿಡಿದು ನೋಡಿದರೆ ತುಪ್ಪದ ಹೊಳಪಿನಲ್ಲಿ ಮಡಕೆ ತುಪ್ಪಕ್ಕೂ ಬಾಟ್ಲಿ ತುಪ್ಪಕ್ಕೂ ವ್ಯತ್ಯಾಸ ಗೊತ್ತಾಗ್ತಿದೆ.” ಮಂದಣ್ಣ ಚಿಕ್ಕ ಲೆಕ್ಚರ್ ಕೊಟ್ಟ, ಹೊಸದಾಗಿ ಕೆಲಸ ಕಲಿಯುತ್ತಿದ್ದಾನೆಂದು ಅವನು ಮಾತಿನಲ್ಲೇ ತೋರ್ಪಡಿಸಿಕೊಳ್ಳುತ್ತಿದ್ದ. ಪರೀಕ್ಷೆಯಲ್ಲಿ ಪಾಠ ಒಪ್ಪಿಸುವವನಂತೆ ಮಾತಾಡುತ್ತಿದ್ದ.
ನನಗೆ ಜೇನುತುಪ್ಪದ ಹೊಳಪು ಕಟ್ಟಿಕೊಂಡು ಏನಾಗಬೇಕಿತ್ತು! ನಮ್ಮ ತಂದೆ ಏನೂ ಅದನ್ನು ಪತ್ತೆ ಮಾಡುವಷ್ಟು ತಜ್ಞರೂ ಆಗಿರಲಿಲ್ಲ. ನಾನು ಮಡಕೆ ತುಪ್ಪವನ್ನೇ ಕೊಡಿರಿ ಎಂದು ಹೇಳಿದೆ.
ಆದರೆ ಮಡಕೆ ತುಪ್ಪವನ್ನು ಯಾವ ಲೆಕ್ಕದಲ್ಲಿ ಕೊಡುತ್ತಾರೆ ಗೊತ್ತಾಗಲಿಲ್ಲ. ಮಡಕೆಯಲ್ಲೇ ತುಂಬಿಕೊಡುತ್ತಾರೇನೋ ಎಂದು ಯೋಚಿಸಿದೆ.
ಲಕ್ಷ್ಮಣ “ಎಷ್ಟು ಬೇಕು?” ಎಂದ.
ನಾನು “ಎಪ್ಪತ್ತು ರೂಪಾಯಿ ತಂದಿದ್ದೀನಿ. ಅಷ್ಟಕ್ಕೆ ಎಷ್ಟು ಬರುತ್ತೋ ಕೊಡಿರಿ” ಎಂದೆ. ತಕ್ಷಣ ಅವರಿಬ್ಬರ ಮುಖ ಚಹರೆ ಬದಲಾಗಿ ಗಾಬರಿಯೊಡನೆ “ಅಷ್ಟೊಂದು! ಯಾಕೆ ಸಾರ್” ಎಂದರು. ನಾನು “ಎಷ್ಟು ಬರುತ್ರಿ ಹಾಗಾದ್ರೆ?” ಎಂದೆ. ಲಕ್ಷ್ಮಣ “ನೋಡಿ ಸಾರ್ ಇನ್ನು ಎಂಟು ರೂಪಾಯಿ ಹೆಚ್ಚಿಗೆ ಕೊಡಿ. ಎಪ್ಪತ್ತೆಂಟು ರೂಪಾಯಿಗೆ ಒಂದು ಟಿನ್ ಬರುತ್ತೆ” ಎಂದ. “ಯಾವ ಟಿನ್ ನೋಡೋಣ?” ಎಂದೆ ನಾನು.
ದೊಡ್ಡ ಹಾಲಿನ ಒಂದು ಭಾಗದಲ್ಲಿ ನೂರಾರು ಸೀಮೆ ಎಣ್ಣೆ ಟನ್ಗಳನ್ನು ಒಂದರ ಮೇಲೊಂದರಂತೆ ಎತ್ತರವಾಗಿ ಪೇರಿಸಿದ್ದರು. ನಾನು ಒಳ ಬರುವಾಗಲೇ ಸೀಮೆ ಎಣ್ಣೆ ಗಡಂಗಿನಂತೆ ಕಾಣುತ್ತಿದ್ದ ಆ ಜಾಗವನ್ನು ನೋಡಿದ್ದೆ. ಆದರೆ ಅದರ ತುಂಬೆಲ್ಲಾ ನಾನು ಯಾವುದನ್ನು ಅಮೋಘ ಎಂದು ತಿಳಿದಿದ್ದೆನೋ ಆ ಜೇನನ್ನು ತುಂಬಿದ್ದಾರೆಂದು ತಿಳಿದಿರಲಿಲ್ಲ. ಜೊತೆಗೆ ಕೇವಲ ಏಳು ಬಾಟಲು ಜೇನನ್ನು ಕೊಳ್ಳಲು ಹೋದ ನನಗೆ ಅವರು ಕೊಡಲಿರುವ ದೊಡ್ಡ ಟನ್ ಜೇನುತುಪ್ಪ ನೋಡಿ ಆಶ್ಚರ್ಯವಾಯ್ತು; ಖಂಡಿತವಾಗಿಯೂ ಯಾವುದೋ ಕಲಬೆರಕೆ ಮಾಲನ್ನು ನನಗೆ ಟೋಪಿ ಹಾಕಲು ಈ ಘಾಟಿಗಳು ಯತ್ನಿಸುತ್ತಿದ್ದಾರೆಂದು ಸಂದೇಹ ಬಂತು. ಆದರೆ ಯಾವುದನ್ನು ಕಲಬೆರಕೆ ಮಾಡಿಯಾರು? ಜೋನಿಬೆಲ್ಲ, ಸಕ್ಕರೆಪಾಕ, ಒಳ್ಳೆಣ್ಣೆ ಯಾವುದೂ ಇದಕ್ಕಿಂತ ಅಗ್ಗವಾಗಿ ಟಿನ್ಗೆ ಎಪ್ಪತ್ತೆಂಟಕ್ಕಿಂತ ಕಡಿಮೆ ಇರಲಾರದು!
“ಅಲ್ಲಿ ನೀವು ಹೇಳೋದು ಆ ಸೀಮೆ ಎಣ್ಣೆ ಟನ್ಗಳೇನೇ?”
“ಅಯ್ಯಯ್ಯೋ ಸೀಮೆ ಎಣ್ಣೆ ಅಲ್ಲ ಸಾರ್, ಪ್ಯೂರ್ ಹನಿ!” ಮಂದಣ್ಣ ಉದ್ದರಿಸಿದ.
“ಏನಾದರೂ ಮೋಸ-ಗೀಸ!”
“ಅಯ್ಯಯ್ಯೋ ಇದು ಸೊಸೈಟಿ ಸಾರ್, ಮೋಸ ಗೀಸ, ಕಲ ಬೆರಕೆ, ದಗಲಬಾಜಿ ವ್ಯವಹಾರ ಮಾಡಿದರೆ ಕೋಳ ಹಾಕ್ತಾರೆ ಕೈಗೆ.”
“ಹಂಗಲ್ಲಪ್ಪಾ, ನಿಮಗೆ ಯಾರಾದರೂ ಮೋಸಮಾಡಿ!”
“ಛೇಛೇ, ನಮಗೆ ಮೋಸ ಮಾಡ್ಲಿ ನೋಡನ ಅದಲ್ಲಿ ರೈತರು ಯಾಕೆ ಮೋಸ ಮಾಡ್ತಾರೆ ಸಾರ್! ಈವರೆಗೂ ಅಂತೋರನ್ನ ನಾ ನೋಡ್ಲಿಲ್ಲ. ಏನಾರು ವ್ಯಾಪಾರಗಾರು ಅಂತಾ ಹಲ್ಕ ಕೆಲಸ ಮಾಡಬೋದೇ ವಿನಾ” ಎಂದ ಲಕ್ಷಣ.
“ಹಾಗಿದ್ದರೆ ನೀವು ಹೇಳೋದು ಆ ಸೀಮೆ ಎಣ್ಣೆ ಟಿನ್ ತುಂಬಾ ಜೇನು ತುಪ್ಪಕ್ಕೆ ಎಪ್ಪತ್ತೆಂಟು ರೂಪಾಯಿ!” ಸರಿಯಾಗಿ ಖಾತರಿ ಮಾಡಿಕೊಳ್ಳಲು ನಾನು ಇನ್ನೊಮ್ಮೆ ಕೇಳಿದೆ.
ಇಬ್ಬರೂ “ಹೂ ಮತ್ತೆ” ಎಂದರು.
ಹಾಗೂ ನನಗೆ ನಂಬಿಕೆ ಬರಲಿಲ್ಲ. “ಅಲ್ಲಿ ಅದು ಹ್ಯಾಗೆ ಈ ಬೆಲೆಗೆ ಕೊಡೋದಕ್ಕೆ ಸಾಧ್ಯ” ಎಂದು ಕೇಳಿದೆ.
ತಕ್ಷಣ ಮಂದಣ್ಣ ಅದರ ಕಥೆಯನ್ನು ಸವಿಸ್ತಾರವಾಗಿ ಶ್ರುತಪಡಿಸಿದ, ಕೋರ್ಟಿನಲ್ಲಿ ಸಾಕ್ಷ್ಯ ಹೇಳುವವರ ದನಿಯಲ್ಲಿ, ಅವನ ಹೇಳಿಕೆಯಿಂದ ನನಗೆ ತಿಳಿದುದು ಇಷ್ಟು; ಈ ವರ್ಷ ಮಲೆನಾಡಿನಲ್ಲಿ ಗುರುಗಿ ಎಂಬ ಒಂದು ಜಾತಿಯ ದಟ್ಟವಾಗಿರುವ ಹಳು ಹೂವಾಗಿದೆಯಂತೆ. ಎಂಟು ವರುಷಗಳಿಗೆ ಒಮ್ಮೆ ಹೂವಾಗುವ ಈ ಸಸ್ಯ ಹೂ ಬಿಟ್ಟ ವರ್ಷ ಮಲೆನಾಡಿನಲ್ಲಿ ಊಹಾತೀತ ಪ್ರಮಾಣದಲ್ಲಿ ಜೇನು ಉತ್ಪಾದನೆಯಾಗುತ್ತದಂತೆ. ಈ ಸಾರಿ ಸರಬರಾಜಾದ ಜೇನನ್ನು ಕೊಳ್ಳಲು ಸೊಸೈಟಿಯಲ್ಲಿದ್ದ ಹಣವೆಲ್ಲಾ ಖರ್ಚಾಗಿ, ಎತ್ತಿದ ಸಾಲವೆಲ್ಲಾ ಖರ್ಚಾಗಿ, ಜೇನು ಕೊಳ್ಳಲು ಹಣವೇ ಇಲ್ಲದೆ ಅನೇಕರನ್ನು ನಿಧಾನವಾಗಿ ತನ್ನಿರೆಂದು ಹೇಳಿ ವಾಪಾಸು ಕಳಿಸಬೇಕಾಯ್ತಂತೆ. ಜೊತೆಗೆ ಅದನ್ನು ಇಡಲು ಸಹಾ ಜಾಗ ಇಲ್ಲದೆ ಸೀಮೆ ಎಣ್ಣೆ ಟನ್ನುಗಳಲ್ಲಿ ತುಂಬಿ ಈ ರೀತಿ ಲಾಟು ಬಿಸಾಕಿದ್ದೇವೆ ಎಂದು ಹೇಳಿದ.
“ನಾನು ಕೇವಲ ಎಪ್ಪತ್ತು ರೂಪಾಯಿ ತಂದಿದ್ದೇನೆ. ಮಿಕ್ಕಿದ ಎಂಟು ರೂಪಾಯಿಗಳನ್ನು ನಾಳೆ ಕೊಡ್ತೀನಿ. ಈಗ ಒಂದು ಟಿನ್ ಕೊಡಿ” ಎಂದೆ. ನನಗೂ ಈ ಅಗ್ಗದ ಜೇನನ್ನು ಸಾಕಷ್ಟು ಒಯ್ಯೋಣ ಎನ್ನಿಸಿತು.
ಮಂದಣ್ಣ ಚಂಗನೆ ನೆಗೆದು ಹಾರಿ “ತಡೀರಿ ಸಾರ್, ನಾನು ನಿಮಗೆ ಹೈಕ್ಲಾಸು ಜೇನು, ಗುತ್ತಿ ಕಡೇದನ್ನು ಕೊಡ್ತೀನಿ” ಎಂದು ಅತ್ಯುತ್ಸಾಹದಿಂದ ಮುನ್ನುಗ್ಗಿದ ಸಿನೆಮಾರಂಗಕ್ಕೂ ನನಗೂ ಏನೋ ಸಂಬಂಧವಿರುವುದನ್ನು ತಿಳಿದ ಅವನ ಕಲ್ಪನೆ ಏನೇನನ್ನೋ ನನ್ನ ಬಗ್ಗೆ ಊಹಿಸಿತೆಂದು ತೋರುತ್ತದೆ. ಬಹುಶಃ ಆ ನಟರು! ಆ ನಟಿಯರು! ಅವರ ಎದೆ ನಡು ನಿತಂಬಗಳ ಸುತ್ತಳತೆ! ಅವರ ಡ್ಯಾನ್ಸು! ಅವರ ಹಾಡು! ಫೈಟಿಂಗ್! ಓಹ್! ಯಾವುದೋ ಕಿನ್ನರ ಲೋಕದ ಮಾನವನಂತೆ ಕಂಡಿರಬಹುದು ನಾನು.
ಆ ಟಿನ್ಗಳ ಬೆಟ್ಟವನ್ನು ಒಂದೊಂದೆ ಕಾಲಿಟ್ಟು ಹತ್ತತೊಡಗಿದ ಮಂದಣ್ಣ. ಗುತ್ತಿ ಕಡೆಯ ಜೇನಿನ ಟಿನ್ನನ್ನು ಅಲ್ಲೆಲ್ಲೊ ಮೇಲಿಟ್ಟಿದ್ದನೆಂದು ತೋರುತ್ತದೆ, ಅದಕ್ಕಾಗಿ,
“ಲೇ ಹುಷಾರ್ ಕಣೋ ಮಂದಣ್ಣ’ ಎಂದು ಕೂಗಿದ ಲಕ್ಷಣ. “ಲಕ್ಷ್ಮಣಣ್ಣಾ ನೀ ಸೊಲ್ಪ ಸುಮ್ಮಿರಿಯಾ! ಮೇಲಿಟ್ಟೋನು ಯಾರು? ನೀನೋ ನಾನೋ?” ಎಂದು ಮಂದಣ್ಣ ಗೆಳೆಯನ ಎಚ್ಚರಿಕೆಯನ್ನು ಅಲಕ್ಷಿಸಿದ.
ಮಂದಣ್ಣ ಮೇಲೆ ತಲುಪಿ ಹುಡುಕಾಡಿ ಯಾವುದೊ ಒಂದು ಟಿನ್ನಿನ ಜುಟ್ಟು ಹಿಡಿದು ಎಳೆದೊಡನೆಯೇ ಆ ಸೀಮೆ ಎಣ್ಣೆ ಟನ್ನುಗಳ ದಿಣ್ಣೆಯ ಒಂದು ಪಾರ್ಶ್ವ ಅಲ್ಲಾಡತೊಡಗಿತು. ಮಂದಣ್ಣನ ಕಣ್ಣುಗಳಲ್ಲಿ ಗಾಬರಿ ಕಂಡಿತು. ಅವನು ಜಾಗರೂಕತೆ ವಹಿಸುವುದರೊಳಗೆ ದಡಬಡ ಗಡಬಡ ಎಂದು ಹಿಮಪಾತವಾದಂತೆ ಒಂದು ಪಾರ್ಶ್ವದ ಟಿನ್ಗಳು ಕುಸಿಯತೊಡಗಿದವು. ಮಂದಣ್ಣ ಕ್ಷಣಮಾತ್ರದಲ್ಲಿ ಟಿನ್ ಹಿಡಿದುಕೊಂಡು ಜಾರಿ ನೆಲಕ್ಕೆ ಬಿದ್ದ.
ನಾನು ಗಾಬರಿಯಿಂದ ಉರುಳುತ್ತಿರುವ ಟನ್ಗಳನ್ನು ಆತು ಹಿಡಿಯಲು ಹೋದೆ. “ಸಾರ್, ಹೋಗೋಡಿ, ಬನ್ನಿ ಇಲ್ಲಾ” ಎಂದು ಲಕ್ಷ್ಮಣ ಹಿಂದಿನಿಂದ ಗಟ್ಟಿಯಾಗಿ ಕೂಗಿದ. “ಏನೂ ಪರ್ವಾಗಿಲ್ಲ. ಎಲ್ಲ ಡಬ್ಬಿಗೂ ಬೆಸುಗೆ ಹಾಕಿದ್ದೀವಿ, ಎತ್ತಿದ್ದೀವಿ, ಡಬ್ಬಿ ಕಾಲಿನ ಮೇಲೆ ಬಿದ್ದರೆ ಕಷ್ಟ, ಕಬ್ಬ ಇದ್ದಂಗಿರವೆ” ಎಂದು ಹೇಳಿ ಮಂದಣ್ಣನ ಕಡೆ ತಿರುಗಿ “ಈ ಹಲ್ಕ ನನ್ಮಗ ಹೇಳಿದ ಮಾತೊಂದನ್ನು ಕೇಳೋದು ಕಲಿಲ್ಲ” ಎಂದು ಮಂದಣ್ಣನಿಗೆ ಅವಮಾನವಾದಂತಾಯ್ತು. ನಾನು ಕೈ ನೀಡಿದೆ. ಮಂದಣ್ಣ ಜೇನಿನ ಟಿನ್ ತೆಗೆದು ಕೈಗೆ ಕೊಟ್ಟ
ಸತ್ಯವಾಗಿಯೂ ಆ ಟಿನ್ ಜೇನು ಕಲ್ಲುಗುಂಡಿನಂತೆ ತೂಕವಾಗಿತ್ತು. ಅದನ್ನು ಒಯ್ದು ನನ್ನ ನಲ್ವತ್ತು ವರ್ಷ ಹಳೆಯದಾದ ಜೀಪಿನ ಮೇಲಿರಿಸಿದಾಗ ಅದರ ಸ್ಪಿಂಗ್ ಬೇಡುಗಳು ಕಿರೆಂದವು.
2