ಅಫಿಡವಿಟ್ಟು


ಸರಿಯಾಗಿ ಒಂದುನೂರಾ ಆರು ಕೇಜಿ ತೂಕವಿದ್ದ ನಾನು ಅರವತ್ತೊಂಬತ್ತು ಕೇಜಿಗೆ ಇಳಿದಿದ್ದೆ. ಈಗ ದೇಶದೇಶ ತಿರುಗುತ್ತಿದ್ದೆ. ಶಿವಾಜಿನಗರದ ಹಂತಕ ಕೋಳಿ ಫಯಾಜ್‌ನ ಸಂದರ್ಶನದಿಂದ ಆರಂಭವಾದ ಪತ್ರಿಕೋದ್ಯಮದ, ಬರಹದ ಹುಚ್ಚು ನನ್ನನ್ನು ಇಟಲಿಯ ದುರ್ಭರ ಮಾಫಿಯಾದ ತನಕ ಕರೆದೊಯ್ದಿದೆ. ತನಿಖೆ, ಸಂಶೋಧನೆ ಮತ್ತು ಭಾವುಕತೆ ಇಲ್ಲದೆ ಬರೆಯಬಾರದು ಎಂದು ತೀರ್ಮಾನಿಸಲಿಕ್ಕೆ ಇಷ್ಟು ವರ್ಷ ಬೇಕಾಯಿತು.

ಈತನಕ ಸರಿಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳನ್ನು ನೋಡಿದ್ದೇನೆ : ಅವುಗಳಿಂದ ಜನ ಓಡಿ ಬರುತ್ತಿದ್ದ ಸಂದರ್ಭದಲ್ಲಿ ನಾನು ಒಳ ಹೊಕ್ಕಿದ್ದೇನೆ. ಪ್ರೇಮ, ಇತಿಹಾಸ, ಕಾಮ, ಯುದ್ಧ ಅಂಡರ್‌ವರ್ಲ್ಡ್, ಭಯೋತ್ಪಾದನೆ, ಸಿನೆಮಾ, ಅಮ್ಮ-ಹೀಗೆ ನಾನು ಅನೇಕ ಸಂಗತಿಗಳ ಬಗ್ಗೆ ಬರೆದಿದ್ದೇನೆ. ನನಗೆ ಅಕ್ಷರ ಅನ್ನ ಕೊಟ್ಟಿದೆ. ನಾನು ತೃಪ್ತ. ಇಷ್ಟಾದರೂ ಟಿವಿಯೊಳಕ್ಕೆ ಇಣುಕಿದ್ದೇನೆ. ನಾನು ಜನಶ್ರೀ ಟೀವಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದೆ.
ನನಗೆ ಮೊದಲು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಇಪ್ಪತ್ತೂರು ವರ್ಷ-ಆಮೇಲೆ ಎರಡು ಸಲ ಬಂತು. ಶಿವರಾಮ ಕಾರಂತರ ಹೆಸರಿನಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿ ಹಾಗೂ ಅವರ ಹುಟ್ಟೂರಿನ ಪ್ರಶಸ್ತಿ ಬಂದವು. ಮಾಸ್ತಿ ಕಥಾಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂತು. ಮಾಡಿದ ಹೊಟ್ಟೆಪಾಡಿನ ಪತ್ರಿಕೋದ್ಯಮಕ್ಕೆ ‘ಜೀವಮಾನದ ಸಾಧನೆ’ ಅಂತ ಪ್ರಶಸ್ತಿ ಕೊಟ್ಟರು. ನನಗೆ ಯಾವ ಸಂಪತ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೋ, ಅದು ಯಡಿಯೂರಪ್ಪನವರಿಗೇ ಗೊತ್ತು. ‘ಚಲಂ’ ಎಂಬ ತೆಲುಗು ಲೇಖಕನ ಆತ್ಮಚರಿತ್ರೆಯ ಅನುವಾದಕ್ಕೆ ನನಗೆ ಕುವೆಂಪು ಭಾಷಾ ಭಾರತಿ ಅಕಾಡೆಮಿ ಪ್ರಶಸ್ತಿ ನೀಡಿದೆ. ‘ಸಕತ್ತಾಗಿ ಬರೀತಾನೆ ನನ್ಮಗ’ ಎಂಬುದು ಬೆಂಗಳೂರೂ ಸೇರಿದಂತೆ ಅನೇಕ ಊರುಗಳ ಆಟೋ ಡ್ರೈವರುಗಳು ನನಗೆ ಕೊಟ್ಟ ಅತಿ ದೊಡ್ಡ ಪ್ರಶಸ್ತಿ.


‘ಹಾಯ್ ಬೆಂಗಳೂ‌!’ ನನಗೆ ಅನ್ನವಿಟ್ಟ ತಾಯಿ, ‘ಓ ಮನಸೇ…’ ನನ್ನ ಅಬ್ರೆಷನ್ ಟೀವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದು ನನ್ನ ಚಟ. ಸಿನೆಮಾಗಳಲ್ಲಿ ನಟಿಸಿದ್ದು ಕನ್ನಡಿಗರಷ್ಟೇ ಕ್ಷಮಿಸಬೇಕು. ಸರಿಸುಮಾರು ಎಂಟೂವರೆ ಸಾವಿರ ಮಕ್ಕಳು ಡೊನೇಷನ್ ಮತ್ತು ಜಾತಿಯ ಪ್ರಸ್ತಾಪವಿಲ್ಲದೆ ಓದಲು ಸಾಧ್ಯವಾಗಿರುವ ‘ಪ್ರಾರ್ಥನಾ’ ಶಾಲೆ ನನ್ನ ನಿಜವಾದ ಸಾಧನೆ. ಕೆಲವು ಸಿ.ಡಿ.ಗಳನ್ನು ಮಾಡಿದ್ದೇನೆ. ಬೆಂಗಳೂರಿನ ಗಾಂಧಿಬಜಾರ್‌ನಲ್ಲಿ ಬಿ.ಬಿ.ಸಿ. (ಬೆಳಗೆರೆ ಬುಕ್ಸ್‌ ಆ್ಯಂಡ್ ಕಾಫಿ) ಹೆಸರಿನ ಪುಸ್ತಕದ ಮಳಿಗೆ ತೆರೆದಿದ್ದು ನನ್ನ ಅಕ್ಷರ ಲೋಕದ ತಿಕ್ಕಲಿನ ಇನ್ನೊಂದು ಮುಖ. ನನಗೆ ಸಮಾನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ನನ್ನ ಮುಖ ಕಂಡರಾಗದವರೂ ಇದ್ದಾರೆ.


ನನಗೆ ಎರಡು ಹೆಣ್ಣು ಎರಡು ಗಂಡು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರಿದ್ದಾರೆ. ನಾಲ್ವರು ಮೊಮ್ಮಕ್ಕಳಿದ್ದಾರೆ. ಸಿಗರೇಟು, ತಿರುಗಾಟ, ಓದು, ಬರವಣಿಗೆ, ಸಂಗೀತ, ಇತಿಹಾಸ ನನ್ನ ಬಲಹೀನತೆಗಳು. ಜಗತ್ತು ನನ್ನ ಮನೆ.
ಉಳಿದದ್ದು ತಗೊಂಡು ಏನು ಮಾಡುತ್ತೀರಿ?

ಭೀಮೆಯ ಅಂಗಳ ತಲುಪುವ ಮೊದಲು


”ಕ್ಷಮಾ ಮಾಡಬೇಕು ಸಾಹೇಬರ, ನಿಮ್ಮ ಕಣ್ಣು ಕಟ್ಟಿ ಕರಕೊಂಡು ಹೋಗಬೇಕಾಗದ. ಮನಸೀಗೆ ನೋವು ಮಾಡಿಕೋಬ್ಯಾಡ್ರಿ” ಪಕ್ಕದ ಸೀಟಿನಲ್ಲಿ ಕುಳಿತ ಆ ಹುಡುಗ ಸಣ್ಣ ದನಿಯಲ್ಲಿ ಹೇಳುತ್ತಿದ್ದ. ಕಾರಿನ ವೀಲ್ ಹಿಡಿದು ಕುಳಿತವನು ಒಂದು ಹೊಸ ಸಿಗರೇಟು ಹಚ್ಚಿ ಅವನನ್ನೇ ನೋಡಿದೆ. ಹುಡುಗನ ಮುಖದಲ್ಲೊಂದು ಅಪಾಲಜಿ ಇತ್ತು. ಸಿಗರೇಟು ಮುಗಿಯುತ್ತಿದ್ದಂತೆಯೇ ಈತ ನನ್ನ ಕಣ್ಣು ಕಟ್ಟುತ್ತಾನೆ. ನನ್ನನ್ನು ಕಾರಿನ ಹಿಂದಿನ ಸೀಟಿನಲ್ಲಿ ಕೂಡಿಸಲಾಗುತ್ತದೆ. ಆ ತನಕ ಯಾವತ್ತೂ ನಾನು ಹಿಂದಿನ ಸೀಟಿನಲ್ಲಿ ಕೂತವನಲ್ಲ. ನನ್ನ ಕಾರು ನಾನೇ ಡ್ರೈವ್ ಮಾಡಬೇಕು. ಅಕಸ್ಮಾತ್ ಅಪಘಾತವಾದರೆ, ನಾನೇ ಅಪಘಾತ ಮಾಡಿಕೊಂಡೆನೆಂಬ ಸಮಾಧಾನವಾದರೂ ನನಗಿರಲಿ ಅಂತ ಬಯಸುವ ಹುಂಬ ನಾನು. ಡ್ರೈವಿಂಗ್ ಎಂಬುದು ನನ್ನ ಪಾಲಿಗೆ ಬಗೆಹರಿಯದ ಹಂಬಲದ ಕೆಲಸ, ಸ್ಪೀಡು, ಹಾಡು ಮತ್ತು ಮೂಡು ಸೆಟ್ಟಾದರೆ ಅನಾಯಾಸವಾಗಿ ಒಂದು ಸಾವಿರ ಕಿಲೋಮೀಟರುಗಳ ದೂರವನ್ನು ಕ್ರಮಿಸಿ ಬಿಡಬಲ್ಲೆ. ನನ್ನ ಕಾರಿನಲ್ಲಿ ಯಾವ ಘಳಿಗೆಯಲ್ಲಿ ಹುಡುಕಿದರೂ ಸುಮಾರು ಐವತ್ತು ಕೆಸೆಟ್ಟುಗಳ ಮೂಟೆ ಸಿಗುತ್ತೆ.


ಆದರೆ ಈಗ ಸಂಗೀತ ಸ್ತಬ್ದಗೊಳ್ಳಲಿದೆ. ಪತ್ರಿಕೋದ್ಯಮಕ್ಕೆ ಬಂದು ಒಂದೂವರೆ ದಶಕವಾಗಿದೆ. ಎಂತೆಂಥ ಪಾತಕಿಗಳನ್ನೂ ಭೇಟಿಯಾಗಿದ್ದೇನೆ. ತಮ್ಮ ತಾಣಗಳಿಗೆ, ಸ್ಥಾವರಗಳಿಗೆ ಅವರು ನನ್ನನ್ನು ಕರೆಸಿಕೊಂಡಿದ್ದಾರೆ. ಆದರೆ ಯಾರೂ ಹೀಗೆ ಕಣ್ಣು ಕಟ್ಟುತ್ತೇವೆ ಅಂದಿರಲಿಲ್ಲ. ನನ್ನದೇ ಕಾರಿನಲ್ಲಿ ನನ್ನನ್ನು ಹಿಂದಿನ ಸೀಟಿಗೆ ಕಣ್ಣು ಕಟ್ಟಿ ಕೆಡವಿ ಗೊತ್ತಿಲ್ಲದ ತಾಣಕ್ಕೆ ಕರೆದೊಯ್ದಿರಲಿಲ್ಲ.


“ಆಯ್ತು ಕಟ್ರಿ” ಅಂದವನೇ ವೀಲ್ ಬಿಟ್ಟಳಿದು ಸಿಗರೇಟು ನೆಲಕ್ಕೆ ಒಗೆದೆ. ಕಾರಿನಲ್ಲಿ ಅವರಿಬ್ಬರೇ ಇದ್ದರು. ರಾಜು ಮತ್ತು ರಾಜು! ನನ್ನನ್ನು ಬೆಳ್ಳಂಬೆಳಗ್ಗೆ ಬಿಜಾಪುರದ ಅದಿಲ್‌ಶಾಹಿ ಹೊಟೇಲಿನಿಂದ ಹೊರಡಿಸಿಕೊಂಡು ಸೊಲ್ಲಾಪುರಕ್ಕೆ ಕರೆತಂದಿದ್ದರು. ಎಷ್ಟು ಸಲ ಕೇಳಿದರೂ ತಮ್ಮಿಬ್ಬರ ಹೆಸರುಗಳನ್ನು ‘ರಾಜು’ ಎಂದಷ್ಟೆ ಹೇಳುತ್ತಿದ್ದರು. ಅವು ಅವರ ನಿಜದ ಹೆಸರುಗಳಲ್ಲವೆಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅನವಶ್ಯಕ ಕುತೂಹಲ ತೋರಿಸಿದರೆ ಕೆಲಸ ಕೆಡುತ್ತದೆ. ಸುಮ್ಮನೆ ಕುಳಿತೆ. ತೆಳ್ಳಗೆ ಕಪ್ಪಗಿದ್ದ, ಹೊಳೆಯುವ ಕಣ್ಣುಗಳ, ನಗು ಮುಖದ ಹುಡುಗ ಬಂದು ನನ್ನ ಪಕ್ಕಕ್ಕೆ ಕುಳಿತವನೇ ದೊಡ್ಡದೊಂದು ಸ್ಕಾರ್ಫ್‌ನಿಂದ ನನ್ನ ಕಣ್ಣು ಕಟ್ಟಿದ. ಮತ್ತೊಬ್ಬ ರಾಜು ವೀಲ್ ಹಿಡಿದು ಕುಳಿತ. ಕಾರಿನ ಇಗ್ನಿಷನ್ ತಿರುವಿದ್ದು ಗೊತ್ತಾಯಿತು. ಸೊಲ್ಲಾಪುರದ ಪುಟ್ಟ ಸರ್ಕಲ್ ಒಂದರಿಂದ ನನ್ನ ಕಾರು ಕದಲುತ್ತಿದ್ದಂತೆಯೇ ಇಬ್ಬರು ವ್ಯಕ್ತಿಗಳು ನ್ನ ಕಾರಿನೊಳಕ್ಕೆ ದಾಖಲಾದರು. ನನಗೀಗ ಏನೂ ಕಾಣುತ್ತಿರಲಿಲ್ಲ. ದೇಹಗಳ ವಾಸನೆ ಮಾತ್ರ ಗ್ರಹಿಕೆಗೆ ಬರುತ್ತಿತ್ತು. ಕಾರಿನಲ್ಲಿ ಯಾರೂ ಮಾತನಾಡುತ್ತಿರಲಿಲ್ಲ.


ಇದೆಲ್ಲ ಶುರುವಾದದ್ದು 1998ರ ಜುಲೈ- ಆಗಸ್ಟ್ ತಿಂಗಳುಗಳಲ್ಲಿ, ಅದಕ್ಕೆ ಮುಂಚೆ ನಾನು ಸಾಕಷ್ಟು ಸಲ ಬಿಜಾಪುರಕ್ಕೆ ಹೋಗಿದ್ದೆನಾದರೂ, ಇಂಡಿ ತಾಲೂಕಿಗೆ ಕಾಲಿಟ್ಟಿರಲಿಲ್ಲ. ಬಳ್ಳಾರಿಯಲ್ಲಿ ಬಿ.ಎ. ಓದುತ್ತಿದ್ದ ಕಾಲದಲ್ಲಿ ನನಗೊಬ್ಬ ಗೆಳತಿಯಿದ್ದಳು; ಸೀಮಾ ಪಾಟೀಲ್. ಅವಳನ್ನು ಸುಮ್ಮನೆ ಮಾತನಾಡಿಸಿದರೆ ಸಾಕು, ಅವಳ ತಂದೆ-ತಾಯಿ ಮಹಾಪರಾಧವಾಗಿ ಹೋಯಿತೆಂಬಂತೆ ಥರಗುಡುತ್ತಿದ್ದರು. ಯಾವಾಗಾದರೊಮ್ಮೆ ಅವರ ಮನೆಯ ಕಡೆಗೆ ಹೋದರೆ ಕಿಟಕಿಯ ಸರಳುಗಳ ಹಿಂದೆ ಸೀಮಾ ಪಾಟೀಲಳ ನಿಸ್ಸಹಾಯಕ ಆಸೆಯ ಕಣ್ಣುಗಳು ಅರಳಿಕೊಂಡಿರುವುದು ಕಾಣುತ್ತಿತ್ತು. ಅವಳಿಗೆ ಮನೆಯಿಂದ ಆಚೆಗೆ ಬರಲೇಕೂಡದೆಂಬ ದಿಗ್ಧಂಧನ ಬಿದ್ದಂತಾಗಿತ್ತು. ಅದೊಂದು ರಣ ಬೇಸಿಗೆಯ ಸಂಜೆ, ಬಳ್ಳಾರಿಯ ಪಾರ್ವತಿ ನಗರದ ಪುಟ್ಟ ಬೆಟ್ಟದ ಬುಡದಲ್ಲಿ ರಹಸ್ಯವಾಗಿ ನನ್ನನ್ನು ಭೇಟಿಯಾದ ಸೀಮಾ ಪಾಟೀಲ್,
“ನಮ್ಮ ತಂದೀಗೆ ಇಂಡಿ ಬ್ರಾಂಚಿಗೆ ವರ್ಗಾ ಆಗದ, ನಾವು ನಾಳೆ ಹೊಂಟೀವಿ” ಅಂತ ಹೇಳಿದ್ದಳು. ಅವತ್ತು ಇಂಡಿ ಎಂಬ ಊರು ಯಾವ ದಿಕ್ಕಿಗಿದೆ ಎಂಬುದು ಕೂಡ ನನಗೆ ಗೊತ್ತಿರಲಿಲ್ಲ. ಸೀಮಾ ಪಾಟೀಲಳಿಗೆ ವಿದಾಯ ಹೇಳಿ ನನ್ನ ಸೈಕಲ್ಲಿನ ಪೆಡಲು ತುಳಿದಿದ್ದೆ. ಅವಳ ತಂದೆ-ತಾಯಿ ಅಷ್ಟೊಂದು ಥರಗುಡುವುದಕ್ಕಾಗಲೀ, ಸೀಮಾ ಪಾಟೀಲ್ ನನ್ನನ್ನು ಅಷ್ಟೊಂದು ರಹಸ್ಯವಾಗಿ ಭೇಟಿಯಾಗಲಿಕ್ಕಾಗಲೀ ಕಾರಣವೇ ಇರಲಿಲ್ಲ. There was no affair

ಇದೆಲ್ಲ ನಡೆದದ್ದು 1975-76ರ ಸುಮಾರಿನಲ್ಲಿ. ಆನಂತರ ನನ್ನ ಸ್ಮತಿ ಪಟಲದಿಂದ ಸೀಮಾ ಪಾಟೀಲಳಂತೆಯೇ ಇಂಡಿ ಎಂಬ ಪುಟ್ಟ ಊರಿನ ಹೆಸರು ಕೂಡ ಅಳಿಸಿ ಹೋಗಿತ್ತು. ಮುಂದೆ 1998ರ ಜುಲೈ ತಿಂಗಳ ಒಂದು ಸಾಯಂಕಾಲ ಬೆಂಗಳೂರಿನ ನನ್ನ ಪದ್ಮನಾಭ ನಗರದ ಮನೆಗೆ ಗೆಳೆಯ ಶ್ರೀಧರ್ ಫೋನ್ ಮಾಡಿದ್ದ. ಆ ದಿನಗಳಲ್ಲಿನ್ನೂ ಶ್ರೀಧರ್‌ ಬೆಂಗಳೂರು ಭೂಗತ ಜಗತ್ತಿನ ಶಕ್ತ ತಂಡವೊಂದರ ನಾಯಕನಾಗಿದ್ದ. ನಮ್ಮಿಬ್ಬರ ನಡುವೆ ಗಾಢವಾದ ಗೆಳೆತನ.

”ಇಂಡಿ ಕಾನ್ಸ್ಟಿಟ್ಯೂಯೆನ್ಸಿ ಎಮ್ಮೆಲ್ಲೆ ಗೊತ್ತಲ್ಲ, ರವಿ ಪಾಟೀಲ್ ಅವರು ಬಂದಿದ್ದಾರೆ. ನಿನ್ನ ಮನೆಗೆ ಕರೊಂಡು ಬರ್ತಿದೀನಿ. ನಿಮ್ಮನೇಲೊಂದು ಕಾಫಿ ಕುಡಿದು, ಆಮೇಲೆ ಎಲ್ಲಾದರೂ ಊಟಕ್ಕೆ ಹೋಗೋಣ” ಅಂದ ಶ್ರೀಧರ್, ಅಂದ ವೇಳೆಗೆ ಸರಿಯಾಗಿ ಶ್ರೀಧರ್, ಬಚ್ಚನ್, ರವಿ ಪಾಟೀಲ್‌ ಮತ್ತು ನಾಲ್ಕಾರು ಜನ ನನ್ನ ಮನೆಗೆ ಬಂದರು.
ಅವತ್ತೇ ಮೊದಲು!
ದೊಡ್ಡ ಮುಖದ, ಅಷ್ಟೇನೂ ಆಜಾನುಬಾಹುವಲ್ಲದ, ಆದರೆ ಬಿರುಸು ದೇಹದ ರವಿಕಾಂತ ಪಾಟೀಲ್‌ ಎಂಬ ಆಕೃತಿಯನ್ನು ನಾನು ಅಷ್ಟೊಂದು ಹತ್ತಿರದಿಂದ ನೋಡಿದ್ದು. ಮಾತು ಕಡಿಮೆ. ಕಣ್ಣು ನಿಶ್ಚಲ. ತುಂಬ ಆಕರ್ಷಕವಾಗಿ ದಿರಿಸು ಧರಿಸುವ ಮನುಷ್ಯ. ಮಟ್ಟಸವಾಗಿ ಶೇವ್ ಮಾಡಿದ ಕೆನ್ನೆ, ವಯಸ್ಸು ನಲವತ್ತು-ನಲವತ್ತೈದರ ಮಧ್ಯೆ ಇರಬಹುದು. ನನ್ನ ಮನೆಗೆ ಬಂದು ಕುಳಿತವನು ಅಪ್ಪಿತಪ್ಪಿ ಕೂಡ ಅತ್ತಿತ್ತ ಕಣ್ಣು ಚೆಲ್ಲಲಿಲ್ಲ. ಅನವಶ್ಯಕವಾದ ಒಂದೇ ಒಂದು ಮಾತನಾಡಲಿಲ್ಲ. ಹಾಗೆ ನನ್ನ ಮನೆಯ ಮೇಲ್ಮಹಡಿಯ ಸೋಫಾದ ಮೇಲೆ ಕುಳಿತವನು ಇಂಡಿಯ ನಟೋರಿಯಸ್ ಶಾಸಕ ರವಿಕಾಂತ ಪಾಟೀಲ ಎಂಬ ಸಂಗತಿ ನನಗೆ ಮೊದಲೇ ಗೊತ್ತಾಗಿರದೆ ಹೋಗಿದ್ದಿದ್ದರೆ, ತುಂಬ ಹ್ಯಾಂಡ್‌ಸಮ್ ಆದ ಸಭ್ಯ ನಡುವಯಸ್ಕನೊಬ್ಬನನ್ನು ನೋಡುವಂತೆ ನೋಡಿರುತ್ತಿದ್ದೆ.


ಆದರೆ ರವಿಕಾಂತ ಪಾಟೀಲ ನಮ್ಮ ಪತ್ರಿಕೆಯ ವರದಿಗಾರರ ಸಭೆಗಳಲ್ಲಿ ಚರ್ಚೆಯ ವಸ್ತುವಾಗಿದ್ದ. ಆಗಷ್ಟೆ ನಾವು ಕರ್ನಾಟಕದ ಕ್ರಿಮಿನಲ್ ಶಾಸಕರದೊಂದು ಪಟ್ಟಿ ಮಾಡಿ, ಕ್ರಮೇಣ ಒಬ್ಬೊಬ್ಬರ ಬಗ್ಗೆಯೂ ಬರೆಯಬೇಕೆಂದು ಮಾತಾಡಿಕೊಂಡಿದ್ದೆವು. ಇಂಡಿ ಕ್ಷೇತ್ರದಿಂದ ಪಕ್ಷೇತರನಾಗಿ ಆರಿಸಿ ಬಂದಿದ್ದ ರವಿಕಾಂತ ಪಾಟೀಲನ ಕುರಿತು ಮಾಹಿತಿ ಕೊಡುವವರು ಯಾರಾದರೂ ಇದ್ದಾರಾ ನೋಡಿ ಎಂದು ನನ್ನ ವರದಿಗಾರರಿಗೆ ಸೂಚಿಸಿದ್ದೆ. ಸೊಲ್ಲಾಪುರದ ಟ್ರೇಡ್ ಯೂನಿಯನ್ ಹಣಾಹಣಿಗಳಲ್ಲಿ, ಅಲ್ಲಿನ ಗ್ಯಾಂಗ್‌ವಾರ್‌ಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ರವಿಕಾಂತ ಪಾಟೀಲ್‌ ಕೆಲಕಾಲ ಗೂಂಡಾ ಕಾಯ್ದೆಯಡಿ ಮಹಾರಾಷ್ಟ್ರದ ಜೈಲುಗಳಲ್ಲಿ ಬಂಧಿಸಿಡಲ್ಪಟ್ಟಿದ್ದ ಎಂಬಂತಹ ಅಸ್ಪಷ್ಟ ಮಾಹಿತಿ ನನಗಿತ್ತು. ವಿವರಗಳಾವೂ ಗೊತ್ತಿರಲಿಲ್ಲ.


ಆದರೆ ಹಾಗೆ ಪದ್ಮನಾಭನಗರದ ಮನೆಯ ಮಹಡಿಯ ಮೇಲೆ ಅತ್ಯಂತ ಗಂಭೀರವಾಗಿ, ಸ್ಮಾರ್ಟ್ ಆಗಿ ಕುಳಿತಿದ್ದ ಮನುಷ್ಯ ತೀರ ನಿರ್ದಯಿ ಪಾತಕಿಯಂತೆ ಅವತ್ತು ನನಗೆ ಖಂಡಿತವಾಗಿಯೂ ಕಂಡಿರಲಿಲ್ಲ. ಮನೆಯಲ್ಲಿ ಕಾಫಿಯಾಯಿತು. ಒಂದಷ್ಟು ಹರಟೆಯ ನಂತರ ನಾವೆಲ್ಲ ಬೆಂಗಳೂರಿನ ಬೆಸ್ಟ್‌ ಕ್ಲಬ್‌ನತ್ತ ಹೊರಟೆವು. ರವಿಕಾಂತ ಪಾಟೀಲನದೇ ಕಾರು. ಹಡಗಿನಷ್ಟು ದೊಡ್ಡದಿದ್ದ ಆ ಕಾರಿನಲ್ಲಿ ನಾನು, ರವಿಕಾಂತ್ ಮತ್ತು ಶ್ರೀಧರ್ ಕುಳಿತಿದ್ದೆವು. ಕಾರು ಹೊರಟ ತಕ್ಷಣ ನಾನು ಗಮನಿಸಿದ್ದು, ಕಾರಿನಲ್ಲಿದ್ದ ಆತನ ಕೆಸೆಟ್‌ಗಳ ಕಲೆಕ್ಷನ್ನು ಮತ್ತು ಅದರ ಸ್ಟೀರಿಯೋದಲ್ಲಿ ಮೊಳಗುತ್ತಿದ್ದ ಗುಲಾಮ್ ಅಲಿಯ ಗಝಲು.
“ನಿಮಗೆ ಇದೆಲ್ಲ ಟೇಸ್ಟ್ ಇದೆ ಅಂತ ಗೊತ್ತಿರಲಿಲ್ಲ” ಅಂದೆ.
“ಹಿಂಗೇ… ಕೇಳತಿರ್ತಿನಿ” ಅಂದ ರವಿಕಾಂತ್.
ಬೆಸ್ಟ್ ಕ್ಲಬ್‌ನ ಬೆಟ್ಟದ ನೆತ್ತಿಯ ಮೇಲೆ ಪಾರ್ಟಿ ನಡೆಯಿತು. ರವಿಕಾಂತ ಪಾಟೀಲ ತುಂಬ ಕುಡಿಯಲಿಲ್ಲ. ತುಂಬ ಮಾತಾಡಲೂ ಇಲ್ಲ. ತನ್ನ ಹಾಗೂ ಮಾಲೀಕಯ್ಯ ಗುತ್ತೇದಾರನೆಂಬ ಮಂತ್ರಿಯ ನಡುವೆ ತುಂಬ ಹಿಂದೆ ಸೊಲ್ಲಾಪುರದಲ್ಲಿ ನಡೆದ ಹಣಾಹಣಿಯ ಕುರಿತು ಟೂಕಿಯಾಗಿ ಹೇಳಿದ. ಮಾಲೀಕಯ್ಯ ಗುತ್ತೇದಾರನನ್ನು ಸೊಲ್ಲಾಪುರದ ಬೀದಿಗಳಲ್ಲಿ ನೀವು ಹೊಡೆದಿದ್ದಿರಂತೆ ಹೌದೆ ಎಂದು ಕೇಳಿದುದಕ್ಕೆ,


“ಈಗೇನಿಲ್ರಿ. ನಾವು ಛಲೋನೇ ಇದ್ದೀವಿ!” ಎಂಬ ಮುಗುಮ್ಮಾದ ಉತ್ತರ ಕೊಟ್ಟಿದ್ದ. ಅದಾದ ಮೇಲೆ ಮಾತು, ಪೊಲೀಸ್ ಅಧಿಕಾರಿ ಶಂಕರ ಬಿದರಿಯ ಕಡೆಗೆ ತಿರುಗಿತು. ಆ ದಿನಗಳಲ್ಲಿ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಕರ್ನಾಟಕ ರಾಜಕಾರಣದ ಗೋಪುರದ ತುದಿಯಲ್ಲಿದ್ದರು. ಮುಖ್ಯಮಂತ್ರಿ ಜೆ.ಎಚ್‌.ಪಟೇಲರಿಗೆ ಅವರು ಬೇಹುಗಾರರು. ಇಂಟೆಲಿಜೆನ್ಸ್ ಪಡೆಯ ಮುಖ್ಯಸ್ಥ. ಆಗಷ್ಟೆ ಮಲೆ ಮಹದೇಶ್ವರ ಬೆಟ್ಟದಲ್ಲಿ ವೀರಪ್ಪನ್ ತಂಡದೊಂದಿಗೆ ಬಡಿದಾಡಿ, ದೊಡ್ಡ ಮಟ್ಟದ ಯಶಸ್ಸನ್ನೂ, ಅದಕ್ಕಿಂತ ದೊಡ್ಡ ಮಟ್ಟದ ಅಪಖ್ಯಾತಿಯನ್ನೂ ಗಳಿಸಿಕೊಂಡು ಬೆಂಗಳೂರಿಗೆ ಹಿಂತಿರುಗಿದ್ದರು.


”ಬಿದರಿ ಸಾಹೇಬರು ಕೂಡ ಪ್ರಾಮಿಸ್ ಮಾಡ್ಯಾರ, ನೀವೊಬ್ರು ನನಗೆ ಸಹಾಯ ಮಾಡಿಬಿಟ್ರೆ ನಾನು ಮಂತ್ರಿ ಆಗಿಬಿಡ್ತೀನಿ. ನಿಮಗ ಎಂ.ಪಿ. ಪ್ರಕಾಶ್ ಭಾಳ ಆತ್ಮೀಯರು ಅಂತ ಕೇಳೇನಿ. ಅವರಿಗೊಂದು ಮಾತು ನನ್ನ ಪರವಾಗಿ ಹೇಳೀರೇನು? ಪಟೇಲಿಗೆ ಬಿದರಿ ಸಾಹೇಬರು ಹೇಳೇ ಹೇಳತಾರ. ನೀವು ಇನ್ನೊಂದು ಕಡಿಯಿಂದ ಒತ್ತಡ ಹಾಕಿದರ ಕೆಲಸ ಆಗಿಬಿಡ್ತದ. ಮಂತ್ರಿ ಆಗತೇನಿ!” ಅಂದಿದ್ದ ರವಿ ಪಾಟೀಲ.


ಸೊಲ್ಲಾಪುರದ ಈ ಗ್ಯಾಂಗ್ ಲಾರ್ಡ್‌, ಕರ್ನಾಟಕದ ರಾಜಕೀಯ ಶಕ್ತಿ ಕೇಂದ್ರದ ಪ್ರಮುಖರಾದ ಪೊಲೀಸ್ ಅಧಿಕಾರಿ ಶಂಕರ ಬಿದರಿಯವರಿಗೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಅನಿಸಿದ ಮರುಕ್ಷಣದಲ್ಲೇ ಅವರಿಗಿದ್ದ ಇಂಡಿ ಕನೆಕ್ಷನ್ ಅರ್ಥವಾಗಿ ಹೋಯಿತು. ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಕಾಲದಲ್ಲಿ ಶಂಕರ ಬಿದರಿ ಇಂಡಿ ಎಂಬ ಊರಿನಲ್ಲಿ ಕೇವಲ ಒಬ್ಬ ಟೆಲಿಫೋನ್ ಆಪರೇಟರ್ ಆಗಿದ್ದರು. ಈ ರವಿಕಾಂತ ಪಾಟೀಲನ ಪಾತಕ ವೃಕ್ಷದ ಅರ್ಧ ಬೇರುಗಳಿರುವುದೇ ಇಂಡಿಯಲ್ಲಿ. ಮತ್ತೆಂಥ ವಿವರಣೆ ಬೇಕು?


ಪಾರ್ಟಿ ಮುಗಿಯುತ್ತ ಬಂದಿತ್ತು.
ನಾನು ಇದ್ದಕ್ಕಿದ್ದಂತೆ ಆ ಪ್ರಶ್ನೆ ಯಾಕೆ ಕೇಳಿದೆನೋ? ಇವತ್ತಿಗೂ ನನಗೆ ಗೊತ್ತಿಲ್ಲ.

“ಇಂಡಿಯೊಳಗ ಅದೇನದು ಟೆಲಿಫೋನಿನ ಗದ್ದ?” ಅಂತ ಕೇಳಿಬಿಟ್ಟೆ.
‘ಸುಳ್ಳೇ ನನ್ನ ಮ್ಯಾಲ ಹಾಕಲಿಕ್ಕೆ ಹತ್ಯಾರ. ನನಗೂ ಅದಕ್ಕೂ ಏನೇನೂ ಸಂಬಂಧ ಇಲಿ. ಚಂದ್ಯಾ ಮತ್ತು ಶಿರಸ್ಯಾ ಅನ್ನೋರ ಮಾರಿ ಸೈತ ನಾನು ನೋಡಿಲ್ಲ ” ಅಂದುಬಿಟ್ಟ ರವಿ ಪಾಟೀಲ.
ಅಲ್ಲಿಗೆ ಆ ಮಾತೂ ಮುಗಿಯಿತು. ಪಾರ್ಟಿಯೂ ಮುಗಿಯಿತು. ಉಳಿದಂತೆ ಗಝಲುಗಳ ಬಗ್ಗೆ, ಮುಂಬಯಿಯ ಗ್ಯಾಂಗುಗಳ ಬಗ್ಗೆ, ಮುತ್ತಪ್ಪ ರೈ ಬಗ್ಗೆ, ಭಾಯಿಸಿಂಗ್ ಠಾಕೂರ್ ಬಗ್ಗೆ, ಸೊಲ್ಲಾಪುರ ಮತ್ತು ಔರಂಗಾಬಾದ್ ಜೈಲುಗಳ ಬಗ್ಗೆ ಸುಮ್ಮನೆ ಬೆವರು ಬೆವರಾಗಿ ಮಾತಾಡಿದ್ದೆವು. ಇಂಡಿಯ ಟೆಲಿಫೋನ್ ಗಲಾಟೆಯ ಬಗ್ಗೆ ಹೆಚ್ಚಿನ ಮಾತು ಬೆಳೆಯಲಿಲ್ಲ. ಆದರೆ ರವಿಕಾಂತ ಪಾಟೀಲನನ್ನು ಭೇಟಿಯಾಗುವುದಕ್ಕೆ ಎರಡು ದಿನಗಳಿಗೆ ಮುಂಚೆ ಇಂಡಿಯ ಓದುಗರೊಬ್ಬರು ನನ್ನೊಂದಿಗೆ ಮಾತನಾಡಿದ್ದರು. ಸ್ಥಳೀಯ ಗೂಂಡಾಗಳಿಬ್ಬರನ್ನಿಟ್ಟುಕೊಂಡು ಈ ರವಿಕಾಂತ ಪಾಟೀಲ ಇಂಡಿ ಪಟ್ಟಣದ ವರ್ತಕರಿಗೆ ಫೋನು ಮಾಡಿಸಿ, ಬೆದರಿಸಿ ಹಣ ಕೀಳುತ್ತಿದ್ದಾನೆ ಎಂದು ವಿವರಿಸಿದ್ದರು. “ಸಂಯುಕ್ತ ಕರ್ನಾಟಕ”ದಲ್ಲಿ ಟೆಲಿಫೋನ್ ಬೆದರಿಕೆಗಳ ಬಗ್ಗೆ ಚಿಕ್ಕದೊಂದು ಸುದ್ದಿ ಪ್ರಕಟವಾಗಿತ್ತಾದರೂ, ಅದರಲ್ಲಿ ರವಿಕಾಂತ ಪಾಟೀಲನ ಪ್ರಸ್ತಾಪವಿರಲಿಲ್ಲ. ಬಿಜಾಪುರದ ಎ ಪ್ರತಾಪ ರೆಡ್ಡಿ ಒಂದು ಕರಪತ್ರ ಹಾಕಿಸಿ, ಗೂಂಡಾಗಳ ಟೆಲಿಫೋನ್ ಕರೆಗಳಿಗೆ ಬೆದರಬೇಡಿ, ಯಾರಿಗೂ ಹಣ ಕೊಡಬೇಡಿ, ದಯವಿಟ್ಟು ದೂರು ಕೊಡಿ ಎಂದು ನಾಗರಿಕರನ್ನು ವಿನಂತಿಸಿದ್ದರು. ತೀರ ಒಬ್ಬ ಶಾಸಕ ತನ್ನದೇ ಕ್ಷೇತ್ರದ ವರ್ತಕರನ್ನು ಬೆದರಿಸಿ, ಅಪಹರಿಸಿ ಹಣ ಕೀಳಲು ಸಾಧ್ಯವೆ? ರವಿಕಾಂತ ಪಾಟೀಲ, “ನಾನು ಚಂದ್ರಾ ಮತ್ತು ಶಿರಸ್ಯಾ ಅನ್ನೋರ ಮಾರಿ ಸೈತ ನೋಡಿಲ್ಲ” ಅಂದಾಗ ನನಗದು ಸುಳ್ಳು ಅನ್ನಿಸಲಿಲ್ಲ. ಒಂದು ಸಲ ಇಂಡಿಗೆ ಕಾಲಿಟ್ಟರೆ ಈ ರವಿಕಾಂತ ಪಾಟೀಲನ ಅನಾಹುತಕಾರಿ ಪಾತಕದ ಹುತ್ತವೇ ಹೊರಬೀಳಬಹುದು ಅಂತ ಆ ರಾತ್ರಿಯ ಮಟ್ಟಿಗೆ ನನಗೆ ಖಂಡಿತ ಗೊತ್ತಿರಲಿಲ್ಲ.

ಪಾರ್ಟಿ ಮುಗಿಯಿತು. ರವಿಕಾಂತನ ಕಾರಿನಲ್ಲೇ ನಾನು ಮನೆಗೆ ಹಿಂತಿರುಗಿದೆ. ಅವತ್ತು ಗುರುವಾರ, ಪತ್ರಿಕೆಯ ಕೆಲಸ ಮುಗಿಸಿ, ಪ್ರಿಂಟಿಗೆ ಕಳಿಸಿ, ಮೂಾಲ್ಕು ದಿನಗಳ ನಿದ್ದೆಯನ್ನು ಒಂದೇ ರಾತ್ರಿಯಲ್ಲಿ ಮಾಡಿ ಮುಗಿಸಲು ಚಡಪಡಿಸುವ ದಣಿವಿನ ಗುರುವಾರ ಅದು. ಇನ್ನೇನು ಮಲಗಬೇಕು ಅಂದುಕೊಳ್ಳುತ್ತಿದ್ದಂತೆಯೇ ಮನೆಯ ಫೋನು ಒಂದೇ ಸಮನೆ ಮೊರೆಯತೊಡಗಿತು.


”ನಾನು ರಾಜು ಮಾತಾಡತಿದ್ದೀನ್ರಿ ಸರ. ಇಂಡಿ ತಾಲೂಕಿನ ಸುದ್ದಿ ಬರೀತೀರೇನು? ಇವತ್ತಿನ ತನಕ ಯಾವ ಜರ್ನಲಿಸ್ಟ್‌ ಭೇಟಿ ಆಗದಂಥ ಮನಿಷಾನ್ನ ಭೇಟಿಯಾಗತೀರೇನು? ಬರಿಯೋ ತಾಕತ್ತಿದ್ದರ ಹೇಳಿ. ಬ್ಯಾರೆ ಯಾವ ಪೇಪರಿನೋರಿಗೂ ಸಿಗಲಾರದಂಥ ಸುದ್ದಿ ಕೊಡತೀನಿ” ಅತ್ತಲಿನ ದನಿ ತಣ್ಣಗೆ ವಿವರಿಸುತ್ತಿತ್ತು.
“ಎಲ್ಲಿಗೆ ಬರಲಿ?” ಕೇಳಿದೆ.
“ಎಸೆಲ್ಸಿಗೆ ಬನ್ನಿ” ಅಂದ ಹುಡುಗ.

“ಎಸೆಲ್ಸಿ ಅಂದ್ರೆ?”
“ಸೋಲ್ಲಾಪುರ….”
“ನನಗಷ್ಟು ಪರಿಚಯ ಇಲ್ಲ ಸೊಲ್ಲಾಪುರದ್ದು. ಬಿಜಾಪುರಕ್ಕೆ ಬದ್ದೀನಿ. ಅದಿಲ್‌ಶಾಹಿ ಹೊಟೇಲ್‌ನ್ಯಾಗಿರ್ತಿನಿ. ಬಂದು ಭೇಟಿಯಾಗಿ” ಅಂದೆ. ಅತ್ತಲಿನ ಫೋನು ಡಿಸ್‌ಕನೆಕ್ಟ್ ಆಯಿತು. ತಕ್ಷಣ ಎದ್ದು ಎರಡು ದಿನಕ್ಕಾಗುವಷ್ಟು ಬಟ್ಟೆ, ರಿಪೋರ್ಟಿಂಗಿಗೆ ಬೇಕಾಗುವ ಪ್ಯಾಡ್‌ಗಳು, ಒಂದು ಅತ್ಯಂತ ಮಾಮೂಲಿಯಾದ hot shot ಕೆಮೆರಾ, ಎರಡು ರೀಲು, ಒಂದಷ್ಟು ಹಣ್ಣು ತುಂಬಿಕೊಂಡು ಸೂಟ್‌ಕೇಸ್‌ ಕೈಗೆತ್ತಿಕೊಂಡೇ ಬಿಟ್ಟೆ. ಕಿಸೆಯಲ್ಲಿ ಅಂಗೈ ಗಾತ್ರದ ಪಾಯಿಂಟ್ ಟೂ ಫೈವ್ ಪಿಸ್ತೂಲು. ನನ್ನಷ್ಟೇ ದಣಿದು ಮಲಗಿದ್ದ ನನ್ನ ಹುಡುಗ ಸೀನನನ್ನು ಎಬ್ಬಿಸಿಕೊಂಡು ರಾತ್ರಿಯ ಮೂರನೇ ಜಾವದ ಹೊತ್ತಿಗೆ ನಾನು ಬಿಜಾಪುರದ ಹಾದಿ ಸವೆಸತೊಡಗಿದೆ.


ಹಾಗೆ ಅಪರಿಚಿತ ದನಿಯೊಂದನ್ನು ನಂಬಿಕೊಂಡು ಹೊರಟ ನನ್ನ ಮಿದುಳಿನಲ್ಲಿ ದಾಖಲಾಗಿದ್ದ ಎರಡೇ ಎರಡು ಹೆಸರುಗಳೆಂದರೆ – ಚಂದ್ಯಾ ಮತ್ತು ಶಿರಸ್ಯಾ.”ಚಂದ್ಯಾ ಮತ್ತು ಶಿರಸ್ಯಾ ಅನ್ನೋರ ಮಾರಿ ಸೈತ ನೋಡಿಲ್ಲ ಅಂತ ಆಣಿ ಮಾಡ್ತಾನಿ ರವಿ ಪಾಟೀಲ? ಅವರೆ ಭೇಟಿ ಮಾಡಿಸ್ತೀನಿ ಬನ್ನಿ. ಅವರೇನಂತಾರೋ ಕೇಳ್ರಿ” ಅಂದಿದ್ದ ರಾಜು, ನಂಬಿ ಹೊರಟಿದ್ದೆ.


ನಿಜಕ್ಕೂ ಚಂದಪ್ಪ ಹರಿಜನ ಭೇಟಿಯಾಗುತ್ತಾನಾ?
ತೆಪ್ಪಗೆ ರಾಜುವಿನ ಮಾತು ಕೇಳಿದ್ದಿದ್ದರೆ ರಗಳೆಯಿಲ್ಲದೆ ಭೇಟಿಯಾಗಿ ಬಿಡುತ್ತಿದ್ದನೋ ಏನೋ? ಶನಿವಾರ ಬೆಳಗ್ಗೆ ನಾನು ಚಂದಪ್ಪ ಹರಿಜನನನ್ನು ಭೇಟಿಯಾಗುವುದೆಂದು ನಿಶ್ಚಯವಾಗಿತ್ತು. ಬಿಜಾಪುರದ ಹೊಟೆಲ್ ಅದಿಲ್‌ಶಾಹಿಯಲ್ಲಿ ರಾಜು ನನ್ನನ್ನು ಶುಕ್ರವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಬಂದು ಕಾಣುತ್ತೇನೆಂದಿದ್ದ. ನಾನು ಅವಸರದ ಜೀವಿ. ಒಂದು ಕಡೆ ತೆಪ್ಪಗೆ ಕೂಡುವ ಜಾಯಮಾನದವನಲ್ಲ. ಶನಿವಾರ ಬೆಳಗ್ಗೆಯ ತನಕ ಏನು ಮಾಡಲಿ? ಇಡೀ ಶುಕ್ರವಾರ ಹೊಟೇಲಿನ ಕೋಣೆಯಲ್ಲಿ ಕುಳಿತು ಏನು ಮಾಡಲಿ? ಸುಮ್ಮನೆ ಬಿಜಾಪುರ ಸುತ್ತಿದೆ. ಇಂಡಿ ಪಟ್ಟಣದ ವರ್ತಕರ ಅಪಹರಣಗಳ ಬಗ್ಗೆ ಏನಾದರೂ ಮಾಹಿತಿ ಸಿಗುತ್ತದೇನೋ ಅಂತ ಪ್ರಯತ್ನಿಸಿದೆ. ಬಿಜಾಪುರದ ಒಂದಿಬ್ಬರು ಪತ್ರಕರ್ತರನ್ನು ಭೇಟಿಯಾದರೆ ಅಷ್ಟಿಷ್ಟು ಮಾಹಿತಿ ಸಿಗಬಹುದು. ಆದರೆ, ನಾನು ಬಿಜಾಪುರದ ತನಕ ಬಂದಿದ್ದೇನೆಂಬುದೇ ಸುದ್ದಿಯಾಗಿ ಬಿಡುತ್ತದೆ. ಇಲ್ಲದ ರಗಳೆ, ಪೊಲೀಸ್‌ ಅಧಿಕಾರಿಗಳನ್ನು ಕಾಣುವುದು ಮತ್ತೂ ಅಪಾಯಕಾರಿ ಅನ್ನಿಸಿತು. ಎಲ್ಲ ತಿರುಗಿದರೂ ಬಿಜಾಪುರ ಪಟ್ಟಣ ಅರ್ಧ ಗಂಟೆಯೊಳಗಾಗಿ ಮುಗಿದು ಹೋಗುತ್ತದೆ. ಗೋಳಗುಮ್ಮಟದ ತಂಪಿನಲ್ಲಿ ಜಾವೊತ್ತು ಕೂತು ಬರೋಣವೆಂದುಕೊಂಡವನಿಗೆ ಇದ್ದಕ್ಕಿದ್ದಂತೆ ಭೇಟಿಯಾದವನು ‘ಸಂಯುಕ್ತ ಕರ್ನಾಟಕ’ದ ಬಿಜಾಪುರದ ವರದಿಗಾರ ಶಾಂತಕುಮಾರ್. ಮೂಲತಃ ದಾವಣಗೆರೆಯ ಹುಡುಗ, ಬಿಜಾಪುರಕ್ಕೆ ಬಂದು ಆರೆಂಟು ತಿಂಗಳಾಗಿರಬೇಕು. ಆತನಿಗೆ ಇಂಡಿ ಕುರಿತಂತೆ ಅಷ್ಟಿಷ್ಟು ಗೊತ್ತಿತ್ತು. ಗುಮ್ಮಟದ ಮುಂದಿನ ನೆರಳಲ್ಲಿ ಕುಳಿತು ಲೋಕಾಭಿರಾಮವಾಗಿ ಹರಟಿದೆ.


‘ಟ್ರೈ ಮಾಡ್ತಿದೀನಿ ನಾನು. ಇಷ್ಟರಲ್ಲೇ ಚಂದಪ್ಪ ಹರಿಜನ ಸಿಗೋ ಛಾನ್ಸಿದೆ. ಸಿಕ್ಕುಬಿಟ್ರೆ ಭರ್ಜರಿ ಸ್ಟೋರಿ ಆಗುತ್ತೆ. ನಿಮಗೆ ಖಂಡಿತ ತಿಳಿಸ್ತೀನಿ” ಅಂದ.
“ದಯವಿಟ್ಟು ತಿಳಿಸಿ” ಅಂದೆ.
ನನ್ನೊಳಗೊಂದು ನಗೆಯಿತ್ತು. ಜಗತ್ತಿನ ಯಾವ ಹೆಂಗಸೂ ಹೇಗೆ ತನ್ನ ಗಂಡಸನ್ನು ಇನ್ನೊಬ್ಬ ಹೆಂಗಸಿನೊಂದಿಗೆ share ಮಾಡಿಕೊಳ್ಳಲಾರಳೋ, ಹಾಗೆಯೇ ಒಬ್ಬ ಪತ್ರಕರ್ತ ತನಗೆ ಸಿಕ್ಕ ಸುದ್ದಿಯನ್ನು ಇನ್ನೊಬ್ಬ ಪತ್ರಕರ್ತನೊಂದಿಗೆ share ಮಾಡಿಕೊಳ್ಳಲಾರ. ಶಾಂತಕುಮಾರ್‌ಗೆ ನನ್ನ ಮೇಲೆ ಪ್ರೀತಿ. ಅದಕ್ಕೇ ಹೀಗನ್ನುತ್ತಿದ್ದಾನೆ. ಆತನಿಗೆ ಗೊತ್ತಿಲ್ಲ; ನಾಳೆ ಇಷ್ಟು ಹೊತ್ತಿಗೆ ಚಂದಪ್ಪ ನನ್ನೆದುರಿಗಿರುತ್ತಾನೆ. ಅಷ್ಟರೊಳಗಾಗಿ ಆತನ ಬಗ್ಗೆ, ರವಿಕಾಂತ ಪಾಟೀಲನ ಬಗ್ಗೆ, ಒಟ್ಟಾರೆಯಾಗಿ ಇಂಡಿಯ ಬಗ್ಗೆ ಒಂದಷ್ಟು ಮಾಹಿತಿ ಸಂಗ್ರಹಿಸಿ ಬಿಡಬೇಕು. ಗುಮ್ಮಟದ ನೆರಳಿನಿಂದೆದ್ದು, ಶಾಂತಕುಮಾರ್‌ಗೆ ವಿದಾಯ ಹೇಳಿದವನೇ ಇಂಡಿಯ ದಿಕ್ಕಿಗೆ ಡ್ರೈವ್ ಮಾಡತೊಡಗಿದೆ.


ನನ್ನ ಕಲ್ಪನೆಯಿದ್ದುದೇ ಬೇರೆ. ಬಿಜಾಪುರ ಜಿಲ್ಲೆಯ ರಣ ಬಿಸಿಲಿನಲ್ಲಿ ಒಣಗಿ ಬಾಯಿಬಿಟ್ಟ ಬರಡು ನೆಲದ ಮೇಲೆ ಚಿಗಿತು ನಿಂತ ಪಾಳು ಕೊಂಪೆಯಂತಿರುತ್ತದೆ ಇಂಡಿ ಅಂದುಕೊಂಡಿದ್ದೆ. ಇಷ್ಟು ಒಣ ಸೀಮೆಯಲ್ಲಿ ಅಷ್ಟು ಚೆಂದದ ಹುಡುಗಿ ಸೀಮಾ ಪಾಟೀಲ್ ಹೇಗಾದರೂ ಇದ್ದು ತನ್ನ ಯೌವನ ಭರಿಸಿಕೊಂಡಳೋ ಅಂದುಕೊಳ್ಳುತ್ತಿದ್ದೆ. ಆದರೆ ಇಂಡಿಗೆ ಹತ್ತಿರಾದಂತೆಲ್ಲ ಮನಸ್ಸು ಪ್ರಫುಲ್ಲವಾಗತೊಡಗಿತು. ತೆನೆಯೊಡೆದ ಜೋಳದಲ್ಲಾಗಲೇ ಹಾಲು, ಉದ್ದಕ್ಕೂ ಹಬ್ಬಿ ನಿಂತ ನಿಂಬೆ ತೋಟಗಳ ಮೇಲಿನಿಂದ ಬೀಸಿ ಬರುವ ಗಾಳಿಯಲ್ಲಿ ನಿಂಬೆಯ ಘಮ. ದಿವಿನಾದ ಆರೋಗ್ಯ ತುಂಬಿಕೊಂಡ ಆಳೆತ್ತರದ ಜೋಡಿ ಎತ್ತುಗಳು, ತೋಟಗಳ ಮಧ್ಯೆ ಮಧ್ಯೆ ತಂಪು ನೀರಿನ ಬಾವಿಗಳು. ಹುರಿ ಮೀಸೆಯ ದೃಢಕಾಯದ ಕಪ್ಪನೆಯ ರೈತರು, ತುಂಬು ದೇಹದ ಲಕ್ಷಣವಂತ ಹೆಂಗಸರ ಮೈಗೆ ಇಳಕಲ್ಲಿನ ದಡಾದಡಿ ಸೀರೆ. ಬೆಂಗಳೂರಿನಲ್ಲಿರುವವರಿಗಿಂತ ಇಲ್ಲಿ, ಕರ್ನಾಟಕದ ಈ ತುದಿಯಲ್ಲಿರುವ ಮನುಷ್ಯ ಹೆಚ್ಚು ಸಂತುಷ್ಟನಾಗಿದ್ದಾನೆ ಅನ್ನಿಸಿತು.


ಇಂಡಿ ತಲುಪುವ ಹೊತ್ತಿಗೆ ತಲೆಯ ಮೇಲೆ ದೊಡ್ಡ ಬಿಸಿಲು, ಬಸ್‌ಸ್ಟ್ಯಾಂಡ್ ಪಕ್ಕದ ಚಿಕ್ಕ ಹೊಟೇಲೊಂದರಲ್ಲಿ ಏನನ್ನಾದರೂ ತಿನ್ನೋಣವೆಂದು ಪ್ರಯತ್ನಿಸಿದೆ. ಕಾರಿಳಿದ ತಕ್ಷಣ ಜನ ಮುತ್ತಿಕೊಂಡರು. ಇಂಡಿಯ ಠಾಣೆಯಲ್ಲಿ ಯಾವನಾದರೂ ಪೊಲೀಸ್ ಅಧಿಕಾರಿ ಸಿಕ್ಕರೆ ಕಡೇಪಕ್ಷ ಚಂದಪ್ಪನ ಫೊಟೋ ಆದರೂ ಕೊಟ್ಟಾನು ಅಂದುಕೊಂಡು ಅತ್ತ ಹೋದೆ. ಇಡೀ ಠಾಣೆಯೇ ರಜೆ ಹೋದಂತಿತ್ತು. ಕೊಂಚ ವಯಸ್ಸಾದ ಜಮಾದಾರನೊಬ್ಬ ತಂಬಾಕಿಗೆ ಸುಣ್ಣ ಬೆರೆಸಿ ಅಂಗೈಯ ಮಡುವಿನಲ್ಲಿ ಹಾಕಿಕೊಂಡು ತಿಕ್ಕುತ್ತ ಕುಳಿತಿದ್ದ.


“ಇದೇನ್ರಿ ಇದು ಚಂದಪ್ಪನ ಹಾವಳಿ?” ಅಂದೆ.
ತಿಕ್ಕಿದ ತಂಬಾಕು ಬಾಯಿಗೆ ಹೋಗಲೇ ಇಲ್ಲ. ಮಧ್ಯ ವಯಸ್ಕ ಪೇದೆಯ ಕಣ್ಣುಗಳಲ್ಲಿ ಯಾವುದೋ ದಿಗಿಲು.
“ನೀವು ಅದನ್ನ ಕೇಳೂದಕ್ಕೆ ಬಂದೀರೇ? ತಗೊಂಡು ಏನು ಮಾಡ್ತೀರಿ? ದೊಡ್ಡವರ ಸುದ್ದಿ. ಇತ್ತಿತ್ತಾಗೆ ಒಮ್ಮೆ ಕೇಶಪ್ಪ ತಾವರಖೇಡ ಅರೆಸ್ಸಾಗಿದ್ದನಲ್ಲ? ಎದಿ ತುಂಬ, ಹೆಗಲ ತುಂಬ ಕಾಡತೂಸಿನ ಮಾಲಿ ಹಾಕ್ಕೊಂಡಿದ್ದ. ಕೈಯಾಗ ಫ್ರೀ ನಾಟ್ ಶ್ರೀ ಬಂದೂಕಿತ್ತು. ಕೊರಳಿಗೆ ಬಂಗಾರದ ಲಾಕೀಟು, ಬಂಗಾರದ ಚೈನು. ಕಣ್ಣಿಗೆ ಕರೇ ಚಮ್ಮ ಹಾಕ್ಕೊಂಡಿದ್ದ. ಅವತ್ತೇನೋ ಅವನ ನಸೀಬು ತೊಟ್ಟಿಯಿತ್ತು, ಸಿಗೆ ಬಿದ್ದ. ಅವರೆಲ್ಲಾ ಹಿಡಿಯೂದು ಪೊಲೀಸರ ಕೈಯ್ಯಾಗ ಆದೀತೇನು? ದೊಡ್ಡ ಮಂದಿ ಅದು…” ಅಂದ ನಂತರವೇ ಅವನು ತಂಬಾಕು ಬಾಯಿಗೆ ಹಾಕಿ ಕೊಂಡದ್ದು.

ನನಗೆ ಖಚಿತವಾಗಿ ಹೋಗಿತ್ತು. ಈ ಸೀಮೆಯಲ್ಲಿ ಚಂದಪ್ಪ ಈಗಾಗಲೇ ದಂತ ಕತೆಯಾಗಿದ್ದಾನೆ. ಕೆಳಮಟ್ಟದ ಪೊಲೀಸ್‌ ಅಧಿಕಾರಿಗಳಲ್ಲಿ, ಪೇದೆಗಳಲ್ಲಿ ಅವನ ಬಗ್ಗೆ ಭಯವಿದೆ. ಮುಖ್ಯವಾಗಿ ಸಿಂದಗಿ ಕೋರ್ಟಿನ ಆವರಣದಲ್ಲಿ ಮತ್ತೊಬ್ಬ ಪಾತಕಿ ಅಮೀನ ಸಾಬ ಅವಟಿಯನ್ನು ಕೊಲ್ಲಲು ಸೈನ್ ಗನ್ ಬಳಸಿದಾಗಿನಿಂದ ಚಂದಪ್ಪನ ತಂಡದ ಬಗ್ಗೆ ವ್ಯಾಪಕವಾದ ಭೀತಿ ಹುಟ್ಟಿಕೊಂಡಿದೆ. ಇಂಡಿ ತಾಲೂಕೆಂಬುದು ಪುಟ್ಟ ಪುಟ್ಟ ಹಳ್ಳಿಗಳ ಚಿಕ್ಕ ಸಂಕುಲ. ಇಲ್ಲಿ ಯಾವ ಮಾತೂ ಗೌಪ್ಯವಾಗಿರುವುದಿಲ್ಲ. ಎಲ್ಲಿ ಯಾರೇ ಮಾತಾಡಿದರೂ ಅದು ಚಂದಪ್ಪನ ಕಡೆಯ ಜನಕ್ಕೆ ತಲುಪುತ್ತದೆ. ಯಾರೂ ಜೀವ ಕಳೆದುಕೊಳ್ಳಲು ಬಯಸುವುದಿಲ್ಲ. ಸದ್ಯಕ್ಕೆ ಅವನಿಗೆ ಪ್ರಬಲನಾದ ಶತ್ರುವೂ ಇಲ್ಲ: ಒಬ್ಬ ರವಿಕಾಂತ ಪಾಟೀಲನ ಹೊರತು! ತಮಾಷಿಯೆಂದರೆ, ತನ್ನದೇ ಮತ ಕ್ಷೇತ್ರವಾದ ಇಂಡಿಗೆ ಬರಲು ಖುದ್ದು ರವಿಕಾಂತ ಪಾಟೀಲನಿಗೇ ಧೈರ್ಯವಿಲ್ಲ. ಬಂದೂಕು ಹಿಡಿದ ಹತ್ತಾರು ಜನರ ಮಧ್ಯೆ ಕುಳಿತು, ಹಿಂದೆ-ಮುಂದೆ ಪೊಲೀಸು ಬೆಂಗಾವಲು ಹಾಕಿಕೊಂಡು ಇಂಡಿ ಪಟ್ಟಣಕ್ಕೆ ಬರುತ್ತಾನೆ ರವಿಕಾಂತ್, ಅವನ ತಮ್ಮಂದಿರು ಕೂಡ ಚಂದಪ್ಪನಿಗೆ ಹೆದರಿ ಊರು ಬಿಟ್ಟಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ- ಇದು ಚಂದಪ್ಪನೆಂಬ ಹಂತಕ ಕಟ್ಟಿಕೊಂಡಿರುವ ಖಾಸಗಿ ಕೋಟೆ. ಇಲ್ಲಿ ಕುಳಿತು ಮಾಹಿತಿ ಹೊರಡಿಸುವುದು ದುಸ್ಸಾಧ್ಯ.

”ಅವನ ಮುಖಾನಾದರೂ ನೋಡ್ತೀನಿ. ಚಂದಪ್ಪನದೊಂದು ಫೊಟೋ ಇದ್ರೆ ಕೊಡ್ರಿ” ಅಂದೆ.
ಅರೆವೃದ್ಧ ಜಮಾದಾರ ನಕ್ಕುಬಿಟ್ಟ. ಅಂದೆ.
“ಚಂದಪ್ಪನ ಮಾರಿ ನೋಡಿದ ಪೊಲೀಸರೇ ಇಲ್ಲ. ಇನ್ನ ಅವನ ಫೋಟೋ ಯಾರು ತೆಗೀತಾರ? ಇಲ್ಲೇ ಕಣ್ಣೆದುರಿಗೇ ಓಡಾಡಿದರೂ ನಮಗ ಇವನೇ ಚಂದಪ್ಪ ಅಂತ ಗೊತ್ತಾಗೂದಿಲ್ಲ. ನೀವೊಳ್ಳೆ ಪ್ರಶ್ನಾ ಕೇಳತೀರಿ!” ಅಂದುಬಿಟ್ಟ. ಸರಿಸುಮಾರು ಒಂದೂವರೆ ದಶಕದಿಂದ ರಕ್ತ ಹೆಪ್ಪುಗಟ್ಟಿಸುವಂಥ ಹತ್ಯೆಗಳಲ್ಲಿ ಭಾಗವಹಿಸಿದ ಪಾತಕಿಗೆ ಒಂದೇ ಒಂದು ಕಡೆಯೂ ‘ಕ್ಯೂ’ ಬಿಡದೆ ನಡೆದು ಹೋಗುವುದು ರೂಢಿಯಾಗಿದೆ ಅನ್ನಿಸಿತು. ಅವತ್ತಿನ ಮಟ್ಟಿಗೆ ಚಂದಪ್ಪನ ಒಂದು ಮಾಮೂಲಿ ಫೊಟೋಗ್ರಾಫ್ ಕೂಡ ಪೊಲೀಸರ ಬಳಿ ಇರಲಿಲ್ಲ. ತೀರ ಚಂದಪ್ಪನನ್ನು ಗುಂಡಿಕ್ಕಿ ಕೊಲ್ಲುವುದಕ್ಕೆ ಕೆಲವು ತಿಂಗಳಿಗೆ ಮುಂಚೆ ಅದು ಹೇಗೋ ಚಂದಪ್ಪನದೊಂದು ಭಾವಚಿತ್ರವನ್ನು ಬಿಜಾಪುರದ ಎಸ್ಪಿ ಪ್ರತಾಪರೆಡ್ಡಿ ಸಂಪಾದಿಸಿದ್ದರು. ಅವನನ್ನು ಕೊಂದಾದ ಮೇಲೆ ಹಣಕ್ಕೆ ಬಟ್ಟೆ ತೊಡಿಸಿ ಹತ್ತಾರು ಫೊಟೋ ತೆಗೆಸಿದರು. ವಿಡಿಯೋ ತೆಗೆಸಿದರು. ಅದು ಬಿಟ್ಟರೆ ಬಿಜಾಪುರದ ಪೊಲೀಸ್ ದಾಖಲೆಗಳಲ್ಲಿ ಇದ್ದದ್ದು- ನಾನು ತೆಗೆದು ಪ್ರಕಟಿಸಿದ ಫೊಟೋಗಳು ಮಾತ್ರ.


ಇಂಡಿ ಠಾಣೆಯ ಪೇದೆಯೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಖಾತರಿಯಾದ ಮೇಲೆ ಸಟ್ಟನೆ ಎದ್ದು ಆಲಮೇಲಕ್ಕೆ ಹೊರಟೆ, ಇಂಡಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರವಿರುವ ಚಿಕ್ಕ ಊರದು. ಭೀಮಾ ತೀರದ ಹಂತಕರ ಅಸಲಿ ಅಡ್ಡೆಗಳ ಪೈಕಿ ಒಂದು. ಇನ್ನೇನು ಇಂಡಿ ಪಟ್ಟಣದ ಸರಹದ್ದು ದಾಟಿ ಆಲಮೇಲದ ದಿಕ್ಕಿಗೆ ಕಾರಿನ ಆಕ್ಸಿಲರೇಟರು ತುಳಿಯಬೇಕು, ಅಷ್ಟರಲ್ಲಿ, ಬೆಳಗೇರಿ ಸರ ” ಎಂಬ ದನಿ ಕೇಳಿಸಿತು. ನನ್ನ ಕಾರಿನೆಡೆಗೆ ಕೃಶನಾದ, ಒಣಕಲು ಮುಖದ ಯುವಕನೊಬ್ಬ ಓಡಿ ಬರುವುದು ಕಾಣಿಸಿತು. ಅವನ ಹೆಸರು ‘ಕೋಣ’, ಇಂಡಿಗೆ ಕೆಲವೇ ಕಿಲೋ ಮೀಟರು ದೂರದಲ್ಲಿರುವ ಗುಂಜಟಿಗಿ ಗ್ರಾಮದ ಹುಡುಗ. ಪತ್ರಿಕೋದ್ಯಮದ ಖಯಾಲಿ. ನಾನೆಂದರೆ ಪ್ರೀತಿ, ಓಡಿ ಬಂದವನೇ ಕಾರಿನಲ್ಲಿ ಕುಳಿತ. ಬೆಂಗಳೂರಿನಿಂದ ಇಂಡಿಯ ತನಕ “ಸುಮ್ಮೆ ಬಂದೆ” ಅಂತ ಹೇಳಿದರೆ, ಅವನಿಗೆ ನಂಬಲಾಗದ ಅಚ್ಚರಿ. ಅವನ ಸಮಾಧಾನಕ್ಕೊಂದು ಅಪ್ಪ‌ ಕೃಷ್ಣಾ ಪ್ರಾಜೆಕ್ಟಿನ ಕಾಲುವೆಯ ಅವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಬಂದಿದ್ದೇನೆ ಅಂದು ಸುಮ್ಮನಾಗಿಸಿದೆ. ಆದರೆ ಅವನಲ್ಲಿದ್ದ ವಿಲಕ್ಷಣ ಕತೆಗಳು, ವಿವರಗಳು, ಆ ಸೀಮೆಯ ಕುರಿತಾದ ವರ್ಣನೆ ನನ್ನನ್ನು ಅವನೆಡೆಗೆ ತುಂಬ ಆಕರ್ಷಿತನನ್ನಾಗಿ ಮಾಡಿದವು. ಇಂಡಿ ಸೀಮೆಯೆಂಬುದು ಒಂದು ಕಾಲಕ್ಕೆ ಸಂತರ, ಅನುಭಾವಿಗಳ, ಸೂಫಿಗಳ ನಾಡಾಗಿತ್ತು. ಹಲಸಂಗಿಯ ಸಾಹಿತ್ಯಕ ಗೆಳೆಯರು ಬದುಕಿದ್ದ ಸೀಮೆಯಿದು. ಈಗ ಹೀಗಾಗಿದೆ. ನೀವು ಪ್ರಯತ್ನ ಪಟ್ಟರೆ ಸರ ನಿಮಗ ಚಂದಪ್ಪ ಸಿಕ್ಕೇ ಸಿಗ್ತಾ! ಗುಂಜಟಿಗಿಯ ‘ಕೋಣ’ ಉತ್ಸಾಹದಿಂದ ಮಾತನಾಡುತ್ತಿದ್ದ. ಅವನ ಬಾಯಲ್ಲೇ ನಾನು ಉಮರಾಣಿಯ ‘ಶಾಂತನ ಮಕ್ಕಳು’ ಎಂಬ ಶಬ್ದ ಕೇಳಿದ್ದು. ಅದು ಭೀಮಾ ತೀರದ ಹಂತಕರ ಕುರಿತಾಗಿ ಬರೆಯುವ ಪುಸ್ತಕದ ಒಂದು ಸವಿಸ್ತಾರ ಅಧ್ಯಾಯವಾದೀತೆಂದು ಅವತ್ತಿನ ಮಟ್ಟಿಗೆ ನನಗೆ ಅನ್ನಿಸಿರಲಿಲ್ಲ.

ಆದರೆ ಇಂಡಿಯ ಅರ್ಧ ವೃದ್ಧ ಪೇದೆಯ ಮಾತುಗಳು ಆಲಮೇಲದ ಠಾಣೆಗೆ ಕಾಲಿಟ್ಟ ಮರುಕ್ಷಣವೇ ಅನುಮಾನವೇ ಇಲ್ಲದಂತೆ ಖಾತರಿಯಾಗಿ ಹೋದವು.


“ಅದು ಎಲ್ಲಾದ್ರೂ ಸಾಧ್ಯ ಆಗೂ ಮಾತೇ? ಅವರ ವಯಸ್ಸೇನು, ನಮ್ಮ ವಯಸ್ಸೇನು? ಅವರೆಲ್ಲ ಇಪ್ಪತ್ತು-ಮೂವತ್ತು ವಯಸ್ಸಿನ ಹುಡುಗರು. ಕುದರಿ ಓಡಿಧಂಗ ಓಡತಾರೆ. ಕೈಯೊಳಗ ರಿವಾಲ್ವರು, ಪಿಸ್ತೂಲು, ಸ್ಟೆನ್ ಗನ್ನು ಇಟಗೊಂಡಿರ್ತಾರೆ. ನಾವು ಈ ಗಾತ್ರದ ಶ್ರೀ ನಾಟ್ ಶ್ರೀ ಬಂದೂಕು ಹೊತಗೊಂಡು ಓಡತೀವಿ. ನಾವು ಬೋಲ್ಟ್ ಜಗ್ಗಿ ಒಂದು ಗುಂಡು ಹಾರಸೂದರೊಳಗ ಅವರು ಸೈನ್ ಗನ್ ಪೂರಾ ಖಾಲೀ ಮಾಡಿ ನಮ್ಮ ಹೆಣಾ ಕೆಡವತಾರ. ಅವರ ಹಿಡಿಯೂದು ನಮ್ಮ ಕೈಯಾಗಿನ ಮಾತೇನ್ರಿ?”


ನನ್ನೆದುರಿಗೆ ಆಲಮೇಲ ಪೊಲೀಸು ಠಾಣೆಯ ಅಧಿಪತ್ಯಕ್ಕಿದ್ದ ರಾಥೋಡ ಎಂಬ ಅಧಿಕಾರಿ ನಿಸ್ಸಹಾಯಕನಾಗಿ ಕುಳಿತು ಮಾತನಾಡುತ್ತಿದ್ದ. ಅಲ್ಲಿಗೆ ಬಿಜಾಪುರ ಜಿಲ್ಲೆಯ ಪೊಲೀಸರ ಪರಿಸ್ಥಿತಿ ಎಷ್ಟು ದಯನೀಯವಾಗಿತ್ತೋ ಅರ್ಥ ಮಾಡಿಕೊಳ್ಳಿ, ಸಬ್ ಇನ್ಸ್ ಪೆಕ್ಟರ್ ರಾಥೋಡನಿಗೆ ಮಾಮೂಲಿ ದನಿಯಲ್ಲಿ ಮಾತನಾಡುವ ಧೈರ್ಯವೂ ಇರಲಿಲ್ಲ. ಸಣ್ಣಗೆ ಪಿಸುಗುಟ್ಟುತ್ತಿದ್ದ. ಠಾಣೆಯಲ್ಲೇ ಚಂದಪ್ಪನ ಕಡೆಯ ಜನರಿದ್ದಾರೆ! ಆಡಿದ ಪ್ರತಿ ಮಾತೂ ಚಂದಪ್ಪನಿಗೆ ತಲುಪುತ್ತದೆ ಎಂಬುದನ್ನು ರಾಥೋಡನೇ ಪಿಸುಮಾತಿನಲ್ಲಿ ವಿವರಿಸಿದ್ದ. ಪೊಲೀಸ್ ಪಡೆಯೊಳಕ್ಕೇ ತನ್ನ ಕಡೆಯ ಜನರನ್ನು ಚಂದಪ್ಪ ಹರಿಜನ infiltrate ಮಾಡಿಬಿಟ್ಟಿದ್ದಾನೆಂಬ ಸಂಗತಿ ನನಗೆ ಮನವರಿಕೆಯಾಗಿತ್ತು. “ಇವತ್ತು ರಾತ್ರಿ ಈ ದಿಕ್ಕಿಗೆ ನೈಟ್ ರೌಂಡ್ಸ್ ಮಾಡಲು ಬರಕೂಡದು ಎಂದು ಚಂದಪ್ಪ ಫೋನು ಮಾಡಿ ಹೇಳಿದರೆ, ಅವತ್ತು ರಾತ್ರಿ ರಾಥೋಡ ಸಾಹೇಬ ಆ ದಿಕ್ಕಿಗೆ ತಲೆಯಿಟ್ಟು ಕೂಡ ಮಲಗುತ್ತಿರಲಿಲ್ಲ. ಆಲಮೇಲ ಠಾಣೆಯ ಎದುರಿನಲ್ಲಿ ಎರಡು ಮೀಸಲು ದಳದ ಪೊಲೀಸ್‌ ವ್ಯಾನ್‌ಗಳು ನಿಂತಿದ್ದವು. ನೆತ್ತಿಯ ಮೇಲಿನ ಬಿಸಿಲಿಗೆ ಸುಸ್ತಾದವರಂತೆ ಆ ವ್ಯಾನಿನೊಳಗಿನ ಪೇದೆಗಳು ಅಲ್ಲಲ್ಲೇ ಅಂಗಿ ಕಿತ್ತೆಸೆದು ಮಲಗಿದ್ದರು. ಆ ದೃಶ್ಯ ಬಿಜಾಪುರ ಜಿಲ್ಲೆಯ ಇಡೀ ಪೊಲೀಸ್ ವ್ಯವಸ್ಥೆಯನ್ನು ವಿವರಿಸುವಂತಹುದಾಗಿತ್ತು. ಹಾಗೆ ನಾನು ಮೊದಲ ಬಾರಿಗೆ ಆಲಮೇಲಕ್ಕೆ ಹೋದಾಗ, ಆಗಿನ್ನೂ ಪೊಲೀಸರಿಗೆ ಗುಂಡು ನಿರೋಧಕ ಕವಚ ಕೊಟ್ಟಿರಲಿಲ್ಲ. ಕೈಗಳಿಗೆ ಕಾರ್ಬೈನ್ ಬಂದೂಕು ಕೊಟ್ಟಿರಲಿಲ್ಲ. ಇಡೀ ಪಡೆಯಲ್ಲಿ ಒಬ್ಬೇ ಒಬ್ಬ ಖದರುದಾರ ಪೊಲೀಸ್ ಪೇದೆ ಅವತ್ತಿನ ಮಟ್ಟಿಗೆ ಇರಲಿಲ್ಲ. ಠಾಣೆಯಿಂದ ಹೊರಬಿದ್ದು ನನ್ನ ಕಾರಿನ ಬಳಿಗೆ ಬರುತ್ತಿದ್ದಂತೆಯೇ ನನಗೆ ಗೊತ್ತಾಯಿತು: ನನ್ನನ್ನು ಅನೇಕರು ಗಮನಿಸುತ್ತಿದ್ದಾರೆ!

“ಇಂಡಿ ಶಾಸಕ ರವಿ ಪಾಟೀಲರ ಬಗ್ಗೆ ಏನನ್ನಿಸುತ್ತದೆ?” ಅಂತ ನಾಲ್ಕಾರು ಜನರನ್ನು ಕೇಳಿದೆ.


”ಏ! ಛಲೋ ಮನಿಶಾರೀ…” ಎಂಬ ಉತ್ತರ ಬಂತು.

“ಚಂದಪ್ಪನ ಬಗ್ಗೆ ಏನನ್ನಸ್ತದೆ?” ಕೇಳಿದೆ.
”ಏ! ಅಂವ ಛಲೋ ಇದ್ದಾನೀ…” ಅಂದರು.

‘ಬಿಜಾಪುರದ ಎಸ್ಪಿ ಪ್ರತಾಪ ರೆಡ್ಡಿ ಹೆಂಗೆ?” ಅಂದೆ.

”ಅಗದೀ ಛಲೋ ಆಫೀಸರ್ ಇದ್ದಾನೀ…” ಅಂದರು.


ಈ ಭಾಗದ ಜನಕ್ಕೆ ಸ್ವತಂತ್ರವಾಗಿ ಮಾತನಾಡುವುದು ಹಾಗಿರಲಿ, ಸ್ವತಂತ್ರವಾಗಿ ಯೋಚನೆ ಮಾಡುವುದೂ ಮರೆತು ಹೋಗುವಷ್ಟು ಭಯ ಆವರಿಸಿಕೊಂಡಿದೆ ಎಂಬುದು ಸ್ಪಷ್ಟವಾಯಿತು. ಇಂಡಿಯ ವರ್ತಕರಂತೂ, ಯಾರು ಫೋನು ಮಾಡಿ ಬೆದರಿಸಿದರೂ ಚೀಲಗಳಲ್ಲಿ ಹಣ ತುಂಬಿಕೊಂಡು ಹೋಗಿ ಕೊಟ್ಟು ಬರಲು ಅಣಿಯಾಗುತ್ತಿದ್ದರು. ಇಡೀ ಸೀಮೆಯನ್ನು ಭಯವೆಂಬುದು ಚಾದರದಂತೆ ಆವರಿಸಿಕೊಂಡಿತ್ತು. ಆದರೆ ಸಾಮಾನ್ಯ ಜನ ಚಂದಪ್ಪನ ಬಗ್ಗೆ ವಿಲಕ್ಷಣ ರೀತಿಯ ಅಕ್ಕರೆಯಿಂದಲೇ ಮಾತನಾಡುತ್ತಿದ್ದರು. ಅವನು ಹಂತಕನೋ, ಮತ್ತೊಂದೋ, ಬಡವರ ತಂಟೆಗೆ ಬರುವವನಲ್ಲ ಎಂಬ ಸಮಾಧಾನ ಅವರಿಗಿತ್ತು. ಕೆಲವರು ಆರಾಧನೆಯ ದನಿಯಲ್ಲಿ ಮಾತನಾಡುತ್ತಿದ್ದರು; ಅದರಲ್ಲೂ ಕೆಳವರ್ಗದವರು.


ಇನ್ನು ಹೆಚ್ಚು ಹೊತ್ತು ಆಲಮೇಲದಲ್ಲಿದ್ದರೆ ಕೆಲಸ ಕೆಟ್ಟಿತು ಅನ್ನಿಸಿ ಕಾರು ವಾಪಸು ತಿರುಗಿಸಿದೆ. ಇಂಡಿಯಲ್ಲಿ ಯಾವುದಾದರೂ ಹೊಟೇಲಿಗೆ ನುಗ್ಗಿ ಎರಡು ತುತ್ತು ತಿನ್ನಲು ಸಾಧ್ಯವಾದೀತೇನೋ ಎಂದು ಪ್ರಯತ್ನಿಸಿದೆ. ಚಿಕ್ಕ ಊರುಗಳಲ್ಲಿ ಆಗಂತುಕರು, ಅದರಲ್ಲೂ ನನ್ನಂತೆ ಕಾರಿನಲ್ಲಿ ಅವತರಿಸುವ ಪೆದ್ದರು ಬೇಗ ಗುರುತು ಸಿಕ್ಕುಬಿಡುತ್ತೇವೆ. ಮೊದಲೇ ವಾರಕ್ಕೊಮ್ಮೆ ಪತ್ರಿಕೆಯಲ್ಲಿ ಫೊಟೋ ಛಾಪಿಸಿಕೊಂಡು ಓಡಾಡುವ ಅವಿವೇಕಿ ನಾನು. ಇಂಡಿಯಲ್ಲಿ ತುಂಬ ಹೊತ್ತು ಕಾಣಿಸಿಕೊಂಡರೆ, ಆಗಬೇಕಾದ ಅತಿಮುಖ್ಯ ಕೆಲಸ ಆಗದೆ ಹೋದೀತು ಅನ್ನಿಸಿ ಇಂಡಿಯಲ್ಲಿ ಕಾರು ನಿಲ್ಲಿಸದೆ ಹೊರಟುಬಿಟ್ಟೆ, ದಾರಿಯಲ್ಲಿ ಗುಂಜಟಿಗಿ ಗ್ರಾಮದಲ್ಲಿದ್ದ ‘ಕೋಣ’ನ ಮನೆಗೆ ಹೋಗಿ ಕೆಲವು ಫೊಟೋಗಳನ್ನು ಆತನಿಂದ ಇಸಿದುಕೊಂಡೆ. ಬರಲಿರುವ ವಾರಗಳಲ್ಲಿ ಇಂಡಿ ಸೀಮೆ ಅದೆಂಥ ಸಂಚಲನಕ್ಕೆ ಈಡಾಗಲಿದೆಯೆಂಬುದರ ಅರಿವಿಲ್ಲದ ಆ ಹುಡುಗ ರವಿ ಪಾಟೀಲನದೂ ಸೇರಿದಂತೆ ಕೆಲವು ರಾಜಕಾರಣಿಗಳ ಫೊಟೋಗಳನ್ನು ತನ್ನ ಫೈಲುಗಳಿಂದ ತೆಗೆದುಕೊಟ್ಟಿದ್ದ.


ಅವನು ಇಳಿದು ಹೋದ ಮೇಲೆ ಝಳಕಿ ಕ್ರಾಸಿನತ್ತ ಕಾರಿನ ಪೆಡಲು ತುಳಿಯುತ್ತಿದ್ದರೆ, ಆಗ ಕಾಣಿಸಿಕೊಂಡಿತು ಹಸಿವು! ಎಷ್ಟು ಸಿಗರೇಟು ಸುಟ್ಟರೂ ಹಸಿವು ಇಂಗಲೊಲ್ಲದು. ಒಂದು ಹಂತದಲ್ಲಿ ಕೈ ನಡುಗಲು ಪ್ರಾರಂಭಿಸಿದವು. ಕುಡಿಯೋಣವೆಂದರೆ ಕಾರಿನಲ್ಲಿ ನೀರೂ ಇರಲಿಲ್ಲ. ಅಂಥ ಸ್ಥಿತಿಯಲ್ಲಿ ಕಾಣಿಸಿದ್ದು – ಅದೊಂದು ಪುಟ್ಟ ನಿಂಬೆ ತೋಟ. ತೋಟದ ಇನ್ನೊಂದು ಪಾರ್ಶ್ವದಲ್ಲಿ ಜೋಳದ ಹೊಲ. ರೈತನೊಬ್ಬ ಎತ್ತುಗಳನ್ನು ನೆರಳಿಗೆ ಕಟ್ಟಿ, ಕೈಯಲ್ಲಿ ಬುತ್ತಿ ಹಿಡಿದು ಬಾವಿಯ ಪಕ್ಕದ ಮರದ ನೆರಳಿನೆಡೆಗೆ ನಡೆಯುತ್ತಿದ್ದುದು ಕಾಣಿಸಿತು. ಎಲ್ಲ ನಾಚಿಕೆ ಬಿಟ್ಟು “ಅಣ್ಣಾ… ನನಗೆ ಹಸಿವಿ ಆಗ್ಯದ” ಅಂತ ಕೂಗಿಬಿಟ್ಟೆ. ಇಂಡಿ ಸೀಮೆಯ ಆ ರೈತನ ಮುಖವಿನ್ನೂ ನನ್ನ ಕಣ್ಣಲ್ಲಿ ಚಿತ್ರವಾಗಿ ನಿಂತೇ ಇದೆ. ತೆಳ್ಳಗಿನ ಬಿರುಸು ದೇಹದ, ಎತ್ತರನೆಯ ಆಳು. ಸಣ್ಣ ಕಣ್ಣು, ಮುದುರಿದ ಹಣೆ, ನೀಳ ಮೂಗು. ನನ್ನ ಮಾತು ಕೇಳಿಸಿದ್ದೇ ತಡ, ಹೆಗಲ ಮೇಲಿನ ವಸ್ತ್ರ ನೆರಳಿಗೆ ಹಾಸಿ ಬುತ್ತಿ ಬಿಚ್ಚಿಕೊಟ್ಟು ಬಿಟ್ಟ. ಅವತ್ತಿನಿಂದ ಇವತ್ತಿನ ತನಕ ಯಾವಾಗ ಹಸಿವೆಯಾದರೂ ನನಗೆ ನೆನಪಾಗುವುದು ಅದೇ ಅಮಾಯಕ ರೈತನ ಮುಖ. “ತಿನ್ನಿ ಸಾಹೇಬರ. ಈಗ ಬತ್ತೀನಿ” ಅಂದವನೇ ಪಂಪ್ ಹೌಸಿನ ಬೆನ್ನಲ್ಲಿದ್ದ ತನ್ನ ಗುಡಿಸಲ ಕಡೆಗೆ ಓಡಿದ.


ಬಿಚ್ಚಿದ ಬುತ್ತಿಯಲ್ಲಿ ಒಂದು ಅಲ್ಯುಮಿನಿಯಂ ತಟ್ಟೆ, ನಾಲ್ಕು ರೊಟ್ಟಿ, ಪುಂಡಿ ಪಲ್ಯ, ಎರಡು ತರಹದ ಚಟ್ಟಿ ಪುಡಿಗಳು, ಒಂದು ಈರುಳ್ಳಿ, ಪುಡಿಗಳಲ್ಲಿ ಇಂಗಿದಂತಿದ್ದ ಗಟ್ಟಿ ಮೊಸರು, ನಿಗಿನಿಗಿ ಖಾರದ ಎರಡು ಹಸಿರು ಮೆಣಸಿನ ಕಾಯಿ. ಯಾಕೋ ಕಣ್ಣಲ್ಲಿ ನೀರಾಡಿದವು. ಹಸಿವೆಯೆಂಬುದು ಮನುಷ್ಯನನ್ನು ಎಷ್ಟೊಂದು ನಿರ್ಲಜ್ಜನನ್ನಾಗಿ ಮಾಡಿಬಿಡುತ್ತದಲ್ಲವೆ? ರೊಟ್ಟಿ ಮುರಿದು ಪುಂಡಿ ಪಲ್ಯದೊಂದಿಗೆ ತಿನ್ನುತ್ತಿದ್ದರೆ, ಆ ಮಟ ಮಧ್ಯಾಹ್ನದಲ್ಲಿ ದುಡಿದು ಹಸಿದಿರಬಹುದಾಗಿದ್ದ ರೈತನ ಹಸಿವಿನ ಗತಿಯೇನು ಎಂಬುದನ್ನೂ ಯೋಚಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆತ ಅಲ್ಯುಮಿನಿಯಂ ಚೊಂಬಿನಲ್ಲಿ ಮಜ್ಜಿಗೆ ತರುವ ಹೊತ್ತಿಗೆ ನಾಲ್ಕೂ ರೊಟ್ಟಿ ತಿಂದು ಮುಗಿಸಿದ್ದೆ. ಕಣ್ಣಲ್ಲಿ ಕೃತಾರ್ಥ ಭಾವ, ನಿನ್ನ ಊಟ ನಾನು ಮಾಡಿಬಿಟ್ಟೆ. ಅದಕ್ಕೆ ಬದಲಾಗಿ ಒಂದಿಷ್ಟು ಹಣ ಕೊಡಲಾ ಅಂತ ಕೇಳಿದರೆ ಒದ್ದುಗಿದ್ದಾನು ಅನ್ನಿಸಿತು. ಉತ್ತರ ನಾಡಿನ ರೈತ ಅನ್ನ ಹಾಕಲಾರದಷ್ಟು ಜಿಪುಣನಲ್ಲ.


”ಝಳಕಿ ಕ್ರಾಸಿಗೆ ಹೋಗಿ ಧಾಬಾದಾಗಿಂದ ನಿನಗ ಏನಾದ್ರೂ ಕಟ್ಟಿಸಿಕೊಂಡು ಬರಲೇನು?

Leave a Reply

Your email address will not be published. Required fields are marked *