ಯಾಳಿ ಕಾಲ್ಪನಿಕ ಪ್ರಾಣಿ
ಕರ್ನಾಟಕ ರಾಜ್ಯದ ಲಾಂಛನದಲ್ಲಿ ಸಿಂಹಕ್ಕೆ ಆನೆಯ ತಲೆ ಏಕೆ ನೀಡಿದ್ದಾರೆ? ಇದು ಯಾವ ಪ್ರಾಣಿ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಈ ಪ್ರಾಣಿಯನ್ನು ಯಾಳಿ ಎಂದು ಕರೆಯುತ್ತಾರೆ. ಇದು ಒಂದು ಕಾಲ್ಪನಿಕ ಪ್ರಾಣಿ. ಸಾಮಾನ್ಯವಾಗಿ ಸಿಂಹದ ದೇಹವನ್ನೇ ಉಳ್ಳದ್ದಾಗಿರುತ್ತದೆ. ಮುಖದಲ್ಲಿ ಆನೆಯ ಸೊಂಡಿಲನ್ನು, ದಂತಗಳನ್ನು ಹೊಂದಿರುತ್ತದೆ. ಇದರ ಬಾಲವನ್ನು ಕೆಲವು ಕಡೆ ಸರ್ಪದಂತೆ ತೋರಿಸಿರುವುದು ಉಂಟು. ಇದು ಅತ್ಯಂತ ಬಲಶಾಲಿಯಾದ ಪ್ರಾಣಿ ಎಂದು ವರ್ಣಿಸಿದ್ದಾರೆ. ಇದು ಸಿಂಹ ಮತ್ತು ಆನೆಗಳಿಗಿಂತ ಬಹಳಷ್ಟು ಶಕ್ತಿ ಉಳ್ಳದ್ದಾಗಿದೆ ಎಂದು ಹೇಳುತ್ತಾರೆ. ನವಗ್ರಹಗಳಲ್ಲಿ ಒಬ್ಬನಾದ ಬುಧ ದೇವನ ವಾಹನವು ಈ ಯಾಳಿಯೇ ಆಗಿದೆ. ಕಲ್ಯಾಣ ಚಾಲುಕ್ಯರು ಹಾಗೂ ಚೋಳರ ಕಾಲದ ದೇವಾಲಯಗಳಲ್ಲಿ ಈ ಯಾಳಿಯ ಶಿಲ್ಪಗಳನ್ನು ಕಾಣಬಹುದು.