ಹೊಸದಾಗಿ ಆರಂಭವಾಗಿದ್ದ ಅಬಚೂರಿನ ಪೋಸ್ಟಾಫೀಸಿನಲ್ಲಿ ಹಂಗಾಮಿಯಾಗಿ ಪೋಸ್ಟ್ ಮಾಸ್ತರನಾಗಿದ್ದ ಬೋಬಣ್ಣ ಇಂದು ಅತ್ಯಂತ ಅಸಂತುಷ್ಟನೂ ತೊಂದರೆ ಗೊಳಗಾದವನೂ ಆಗಿದ್ದನು. ಮೊದಲು ಅವನು ಅಬಚೂರಿನ ಸಾಹುಕಾರರಾದ ಅಲ್ಲೀಜಾನ್ ಸಾಬರ ತೋಟದಲ್ಲಿ ರೈಟರ್ ಕೆಲಸ ಮಾಡುತ್ತಿದ್ದನು. ಪೋಸ್ಟಾಫೀಸು ಅಬಚೂರಿನಲ್ಲಿ ಹೊಸದಾಗಿ ತೆರೆದಾಗ ಬೋಬಣ್ಣ ಸಾಯಂಕಾಲ ಒಂದು ಗಂಟೆ, ಬೆಳಿಗ್ಗೆ ಒಂದು ಗಂಟೆ ಹಂಗಾಮಿಯಾಗಿ ಪೋಸ್ಟ್ ಮಾಸ್ತರ ಕೆಲಸ ಮಾಡಲು ಒಪ್ಪಿದ್ದನು. ಬೋಬಣ್ಣ ಒಪ್ಪದಿದ್ದರೆ ಅಬಚೂರಿಗೆ ಪೋಸ್ಟಾಫೀಸು ಬರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಅಲ್ಲಿ ಇನ್ನೂ ಯಾರಿಗೂ ಇಂಗ್ಲಿಷ್ ಅಕ್ಷರಗಳು ತಿಳಿಯುತ್ತಲೇ ಇರಲಿಲ್ಲ. ಹಾಗೂ ಇಂಗ್ಲಿಷ್ ತಿಳಿದವರಾರೂ ಆ ಕೊಂಪೆಗೆ ಅಷ್ಟೊಂದು ಸಣ್ಣ ಸಂಬಳಕ್ಕೆ ಬಂದು ಕೆಲಸ ಮಾಡಲು ತಯಾರಿರಲಿಲ್ಲ. ಬೋಬಣ್ಣ ಒಪ್ಪಿದ ನಂತರ ಅವನ ಅತ್ತೆ ಮನೆಯೇ ಪೋಸ್ಟಾಫೀಸ್ ಆಗಿ ಹಂಗಾಮಿಯಾಗಿ ರೂಪಾಂತರಗೊಂಡಿತು. ಹೀಗಾಗಿ ಪೋಸ್ಟಾಫೀಸು ತೆರೆದ ಕೆಲವೇ ದಿನಗಳಲ್ಲಿ ಬೋಬಣ್ಣನೂ ಪೋಸ್ಟಾಫೀಸ್ ಅವಿಭಾಜ್ಯ ಅಂಗ ಗಳೆನ್ನುವಂತಾಯ್ತು.
ಪೋಸ್ಟಾಫೀಸು ಆರಂಭವಾಯ್ತು, ಎಲ್ಲರೂ ಬೋಬಣ್ಣನನ್ನು ಪೋಸ್ಟ್ ಮಾಸ್ತರೇ ಎಂದು ಗೌರವದಿಂದ ಕರೆಯುತ್ತಿದ್ದರು. ಬೋಬಣ್ಣನಿಗೆ ತಾನೊಬ್ಬ ದಿಲ್ಲಿಯೊಡನೆ ಸಂಪರ್ಕ ಹೊಂದಿರುವ ಭಾರತದ ಪ್ರಜೆ ಎಂಬ ಹೆಮ್ಮೆಯುಂಟಾಗತೊಡಗಿತು. ಬೋಬಣ್ಣನ ಎಸ್ಸೆಲ್ಸಿವರೆಗಿನ ಇಂಗ್ಲಿಷ್ ಅವನ ಎಷ್ಟೋ ಪೋಸ್ಟಾಫೀಸಿನ ಕೆಲಸ ಕಾರ್ಯಗಳಿಗೆ ಸಾಲದಾಗುತ್ತಿದ್ದಿತು. ಅದಕ್ಕಾಗಿ ಅವನು ಒಂದು ಹಳೆ ಇಂಗ್ಲಿಷ್-ಕನ್ನಡ ಡಿಕ್ಷನರಿಯನ್ನೂ ಇಟ್ಟುಕೊಂಡನು. ಬೋಬಣ್ಣನು ಅವನ ಅತ್ತೆಮನೆಯಲ್ಲಿಯೇ ವಾಸವಾಗಿದ್ದನು. ಆತನ ಅತ್ತೆಯೂ ಹೆಂಡತಿಯೂ ಸಾಬರ ತೋಟದಲ್ಲಿಯೇ ಬಹುಕಾಲದಿಂದ ಕೆಲಸ ಮಾಡಿಕೊಂಡು ಬಂದವರಾಗಿದ್ದರು. ಬೋಬಣ್ಣ ಸಕಲೇಶಪುರದ ಹತ್ತಿರ ಕೊಡಲಿಪೇಟೆ ಎಂಬ ಒಂದು ಹಳ್ಳಿಯವನು. ಅವನು ಅಲ್ಲಿ ಕೆಲಸವಿಲ್ಲದೆ ಪೋಕರಿ ತಿರುಗುತ್ತಿದ್ದಾಗ ಬೋಬಣ್ಣನ ಅತ್ತೆ ಮಾಚಮ್ಮನೇ ಅವನನ್ನು ಕರೆತಂದು ಮಗಳಿಗೆ ಮದುವೆ ಮಾಡಿ ಮನೆಯಲ್ಲಿಯೇ ಇರಿಸಿಕೊಂಡಿದ್ದಳು. ಓದಿದ ಹುಡುಗನೆಂದು ಅಲ್ಲೀಜಾನ್ ಸಾಬರ ಬಳಿ ಕೇಳಿ ಒಂದು ಕೆಲಸವನ್ನು ಕೊಡಿಸಿದ್ದಳು. ಬೋಬಣ್ಣನಿಗೆ ತಂದೆ-ತಾಯಿ ಯಾರೂ ಇರಲಿಲ್ಲ. ಇಬ್ಬರು ಅಣ್ಣಂದಿರು ಮಾತ್ರ ಇದ್ದರು. ಬೋಬಣ್ಣ ಅತ್ತೆ ಮನೆಗೆ ಹೋಗುವುದಾಗಿ ಹೇಳಿದಾಗ ಸಂತೋಷಗೊಂಡು ಮರುಮಾತಾಡದೆ ಒಪ್ಪಿ ಸಮ್ಮತಿಸಿದ್ದರು. ಸ್ವಭಾವತಃ
ಒಳ್ಳೆಯವನೇ ಆಗಿದ್ದ ಬೋಬಣ್ಣನು ಕೆಲಸವಿಲ್ಲದಿರುವುದರಿಂದ ಕೊಡಲಿಪೇಟೆಯಲ್ಲಿ ಪೋಕರಿ ತಿರುಗುತ್ತಿದ್ದ. ಮದುವೆಯಾಗಿ ಕೆಲಸ ದೊರೆತುದರಿಂದ ಈ ಪೋಕರಿ ಅಲೆತ ಸಂಪೂರ್ಣ ನಿಂತುಹೋಗಿದ್ದಿತು. ಈ ಪರಿಯಾಗಿ ಸುಮಾರು ಮೂರು-ನಾಲ್ಕು ವರ್ಷಗಳವರೆಗೆ ನೆಮ್ಮದಿಯಿಂದ ಕಾಲಹಾಕಿದ್ದ ಬೋಬಣ್ಣ ಇಂದು ಅತ್ಯಂತ ಅಸಂತುಷ್ಟನೂ ದುಃಖಿಯೂ ಆಗಿದ್ದನು.
ಏಕೆ ಸಂಕಟಗ್ರಸ್ತನಾಗಿದ್ದೇನೆಂದು ಅವನಿಗೆ ಬಗೆಹರಿಯದಾಯಿತು. ಸಂಕಟಗಳಿಗೆ ಅವನು ಕಾರಣ ಕಂಡು ಹಿಡಿಯುವುದಿರಲಿ, ಸಂಕಟಗಳೇ ಏನೆಂದು ಅವನಿಗೆ ಅರ್ಥವಾಗಿರಲಿಲ್ಲ.
ಬೋಬಣ್ಣ ಕೆಲಸ ಆರಂಭಿಸಿದಾಗ ಅಲ್ಲೀಜಾನ್ ಸಾಬರ ಮಗನಿಗೆ ಬಂದ ಒಂದು ಕಾಗದ ಕದ್ದಿದ್ದನು. ಒಮ್ಮೊಮ್ಮೆ ತನ್ನ ಈ ಕೃತ್ಯದಿಂದ ಪೋಸ್ಟಾಫೀಸಿಗೆ ಸಂಬಂಧಿಸಿದ ಯಾವುದಾದರೂ ದೆವ್ವವೋ ದೇವರೋ ಮುನಿಯಿತೋ ಎಂದು ಆಲೋಚನೆ ಮಾಡುತ್ತಿದ್ದನು.
ಮಂಗಳೂರಿನಲ್ಲಿ ಓದುತ್ತಿದ್ದ ಅಲ್ಲೀಜಾನ್ ಸಾಬರ ಮಗ ಅಜೀಜ್ ರಜಕ್ಕೆ ಊರಿಗೆ ಬಂದಿದ್ದಾಗ ಅವನಿಗೆ ಯಾರೋ ಸ್ನೇಹಿತರು ಒಂದು ಕವರ್ ಕಳಿಸಿದ್ದರು. ಅದೇನಿರಬಹುದೆಂದು ಬೋಬಣ್ಣನಿಗೆ ಕುತೂಹಲ ಆರಂಭವಾಯ್ತು. ಮೊದಲು ಹಣವಿರಬಹುದೆಂದು ಶಂಕಿಸಿದನು. ಆದರೆ ಕೊನೆಗೆ ಅದೊಂದು ಪ್ರೇಮಪತ್ರ ವಿರಬಹುದೆಂದು ಗುಮಾನಿಯಾಯ್ತು. ಅವನು ಆವರೆಗೂ ಕೂಡ ಒಂದೂ ಪ್ರೇಮ ಸಲ್ಲಾಪ ಕೇಳಿರಲಿಲ್ಲ. ಅಷ್ಟೇ ಅಲ್ಲದೆ ಮದುವೆಯಾದ ನಂತರವೂ ಕೂಡ ಒಂದೇ ಒಂದು ದಿನ ಹೆಂಡತಿಯೊಡನೆ ಹಾಗೆ ವ್ಯವಹರಿಸಿರಲಿಲ್ಲ. ಅತ್ತೆಯೂ ಸಹ ಇದ್ದ ಆ ಮನೆಯೊಳಗೆ ಬೋಬಣ್ಣನಿಗೆ ಅಂಥದಕ್ಕೆ ಅವಕಾಶ ಬಹಳ ಕಡಿಮೆ ಇತ್ತು. ಬೋಬಣ್ಣನಿಗೆ ಅವನ ಹೆಂಡತಿಯ ನಗ್ನತೆಯ ಸ್ಪರ್ಶದ ಅರಿವಿತ್ತೇ ಹೊರತು ಯಾವತ್ತೂ ಬೆಳಕಿನಲ್ಲಿ ಕಂಡೇ ಇರಲಿಲ್ಲ. ಅಜೀಜನಿಗೆ ಬಂದ-ಕಾಗದವು ಪ್ರೇಮ ಪತ್ರವಿರಬಹುದೆಂದು ಸಂಶಯ ಬಂದೊಡನೆಯೇ ಬೋಬಣ್ಣನಿಗೆ ಕುತೂಹಲ ತಲೆಗೇರಿತು. ಎದೆ ಢವಢವ ಹೊಡೆದುಕೊಂಡಿತು. ಆ ಕಾಗದವನ್ನು ಕದ್ದು ಜೇಬಿಗೆ ಇಳಿಬಿಟ್ಟ. ಆ ದಿನವೆಲ್ಲಾ ಬೋಬಣ್ಣನ ಚರ್ಯೆಯೇ ಒಂದು ತರಹೆಯದಾಗಿತ್ತು. ಅನೇಕಬಾರಿ ಅದನ್ನ ಹಿಂತಿರುಗಿಸಬೇಕೆಂದು ಯೋಚಿಸಿದ. ಕಾಗದವನ್ನು ಒಡೆದು ನೋಡಿದರೆ ಅದನ್ನು ಎಂದಿಗೂ ಹಿಂದಿರುಗಿಸಲಸಾಧ್ಯವಾಗುತ್ತದೆಂದು ಹೆದರಿ ಒಡೆದು ನೋಡಲೂ ಇಲ್ಲ. ಹಿಂತಿರುಗಿಸಲೂ ಇಲ್ಲ.
ಬೋಬಣ್ಣನ ಹೆಂಡತಿಯ ಹೆಸರು ಕಾವೇರಿ, ಕಾವೇರಿಗೆ ಒಂದು ಹೆಣ್ಣು ಮಗಳೂ ಒಂದು ಗಂಡು ಮಗುವೂ ಇದ್ದಿತು. ಎರಡನೆಯ ಹೆರಿಗೆಯಾದ ನಂತರ ಕಾವೇರಿ ಪುರುಸೊತ್ತು ಸಿಕ್ಕ ದಿನ ಮಾತ್ರ ಕೆಲಸಕ್ಕೆ ಹೋಗುತ್ತಿದ್ದಳು. ಇಲ್ಲದಿದ್ದರೆ ಅತ್ತೆಯೊಬ್ಬಳೇ ಕೆಲಸಕ್ಕೆ ಹೋಗುತ್ತಿದ್ದಳು. ಬೋಬಣ್ಣನ ಈ ಪರಿಯ ಚರ್ಯೆಯಿಂದ ಅವಳಿಗೆ ಏನೋ ಸಂಶಯ ಆರಂಭವಾಗಿ ಮನಿಯಾರ್ಡರು ಹಣವನ್ನೇನಾದರೂ ಸ್ವಂತಕ್ಕೆ ಉಪಯೋಗಿಸಿಕೊಂಡನೇ ಎಂದು ಗಾಬರಿಯಾದಳು. ಒಂದು ಬಾರಿ ಬೋಬಣ್ಣಮನಿಯಾರ್ಡರೊಂದರ ಒಂದು ರೂಪಾಯಿಯನ್ನು ಸ್ವಂತಕ್ಕೆ ಉಪಯೋಗಿಸಿ ದೊಡ್ಡ